ಕಾಶ್ಮೀರ: ಕಣಿವೆ ರಾಜ್ಯದ ಕಾಶ್ಮೀರದ ಪಂಚ್ ಜಿಲ್ಲೆಯ ಗಡಿ ನಿಯಂತ್ರ ರೇಖೆ (ಎಲ್ಒಸಿ) ಉದ್ದಕ್ಕೂ ಇರುವ ಸೇನಾ ನೆಲೆ ಮತ್ತು ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆಗಳು ಶೆಲ್ ದಾಳಿ ನಡೆಸಿದವು.
ಪದೇಪದೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ನಿಯಮಗಳನ್ನು ಉಲ್ಲಂಘಿಸಿ ಉಪದ್ರವ ನೀಡುತ್ತಿರುವ ಪಾಕ್ನ ಭದ್ರತಾ ಪಡೆಗಳಿಗೆ ಭಾರತೀಯ ಯೋಧರೂ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ. ಭಾನುವಾರ ಶೆಲ್ ಮತ್ತು ಗುಂಡಿನ ದಾಳಿ ನಡೆಸಿದ ಪಾಕ್ ಪಡೆಗಳಿಗೆ ಪ್ರತಿ ದಾಳಿ ನಡೆಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪೊಂಚ್ ಹಾಗೂ ರಜೌರಿ ಜಿಲ್ಲೆಗಳ ನಿಯಂತ್ರಣ ರೇಖೆಯಲ್ಲಿರುವ ಯೋಧರನ್ನು ಭೇಟಿಯಾದ ಬೆನ್ನಲ್ಲೇ ಪಾಕ್ ಈ ಕೃತ್ಯ ಎಸಗಿದೆ. ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.