ಹೈದರಾಬಾದ್: ಬಾಲಕೋಟ್ ವೈಮಾನಿಕ ದಾಳಿ ನಡೆದು 140 ದಿನಗಳ ನಂತರ ಪಾಕಿಸ್ತಾನವು ತನ್ನ ವಾಯು ಮಾರ್ಗವನ್ನು ನಾಗರಿಕ ವಿಮಾನಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದು, ನಷ್ಟದಲ್ಲಿದ್ದ ಭಾರತೀಯ ವಿಮಾನ ಕಂಪನಿಗಳು ನಿಟ್ಟುಸಿರು ಬಿಟ್ಟಿವೆ.
ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ಭಾರತೀಯ ಕಾಲಮಾನ ಮುಂಜಾನೆ 12.41 ರ ಸುಮಾರಿಗೆ ಭಾರತೀಯ ವಾಯುಪಡೆಗೆ ನೋಟಿಸ್ ನೀಡಿದ್ದು, ತಕ್ಷಣದಿಂದ ಜಾರಿಯಾಗುವಂತೆ ತನ್ನ ವೈಮಾನಿಕ ಮಾರ್ಗವನ್ನು ನಾಗರಿಕ ಸಂಚಾರಕ್ಕೆ ಮುಕ್ತಗೊಳಿಸಿರುವುದಾಗಿ ಹೇಳಿದೆ.
ಪಾಕಿಸ್ತಾನ ಈ ಭಾಗದ ವಾಯುಪ್ರದೇಶವನ್ನು ಮುಚ್ಚಿದ ಕಾರಣದಿಂದಾಗಿ ತನ್ನ ವಿವಿಧ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಬೇರೆ ಮಾರ್ಗದಲ್ಲಿ ಕಳುಹಿಸುತ್ತಿದ್ದ ಏರ್ ಇಂಡಿಯಾ ಸಂಸ್ಥೆಗೆ ಸುಮಾರು 491 ಕೋಟಿ ರೂ.ಗಳ ಭಾರಿ ಆರ್ಥಿಕ ನಷ್ಟ ಎದುರಾಗಿತ್ತು ಎನ್ನಲಾಗಿದ್ದು, ಸದ್ಯದ ಕ್ರಮದಿಂದ ಏರ್ ಇಂಡಿಯಾ ಸಂಸ್ಥೆ ನಿರಾಳವಾಗಿದೆ. ಭಾರತದ ಖಾಸಗಿ ವೈಮಾನಿಕ ಸಂಸ್ಥೆಗಳೂ ಕೂಡ ಸಾಕಷ್ಟು ನಷ್ಟ ಅನುಭವಿಸುತ್ತಿದ್ದವು.
ಅಮೆರಿಕ ಹಾಗೂ ಐರೋಪ್ಯ ದೇಶಗಳನ್ನು ತಲುಪಲು ಪಾಕಿಸ್ತಾನ ವಾಯು ಮಾರ್ಗ ಅವಶ್ಯವಾಗಿದೆ. ಅದು ಬಂದ್ ಆಗಿದ್ದ ಕಾರಣದಿಂದಾಗಿ ವೈಮಾನಿಕ ಸಂಸ್ಥೆಗಳು ನಷ್ಟ ಅನುಭವಿಸುತ್ತಿದ್ದವು.