ಅಮೃತಸರ (ಪಂಜಾಬ್): ಪಾಕಿಸ್ತಾನದ ವಿವಿಧ ಜೈಲುಗಳಲ್ಲಿದ್ದ ಐವರು ಭಾರತೀಯ ಕೈದಿಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ. ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನ ಐವರು ಕೈದಿಗಳನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
ಸ್ವದೇಶಕ್ಕೆ ಹಿಂದಿರುಗಿದ ನಂತರ ಕೈದಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಕೈದಿಗಳಲ್ಲಿ ಒಬ್ಬರಾದ ಕಾನ್ಪುರ ನಿವಾಸಿ ಶಂಸುದ್ದೀನ್ ಮಾತನಾಡಿ, 28 ವರ್ಷಗಳ ನಂತರ ಈಗ ಭಾರತಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಪೋಷಕರೊಂದಿಗೆ ವಿವಾದದ ನಂತರ ಅವರು ವೀಸಾದೊಂದಿಗೆ ಪಾಕಿಸ್ತಾನಕ್ಕೆ ಹೋಗಿದ್ದರು. 2012ರಲ್ಲಿ ಅವರ ವೀಸಾ ಅವಧಿ ಮುಗಿದ ನಂತರ ಅವರನ್ನು ಪೊಲೀಸರು ಬಂಧಿಸಿದ್ದು, ಅಂದಿನಿಂದ ಅವರು ಜೈಲಿನಲ್ಲಿದ್ದರು.
ಸೋಮವಾರ ಸಂಜೆ ಸುಮಾರು 4 ಗಂಟೆಗೆ ಪಾಕಿಸ್ತಾನದ ರೇಂಜರ್ಸ್ ಐವರು ಭಾರತೀಯ ಪ್ರಜೆಗಳನ್ನು ಹಸ್ತಾಂತರಿಸಿದೆ ಎಂದು ಎಎಸ್ಐ ಅರುಣ್ ಪಾಲ್ ತಿಳಿಸಿದ್ದಾರೆ. ಕೈದಿಗಳ ಪೈಕಿ ಓರ್ವನ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ. ಹಾಗಾಗಿ ಅಮೃತಸರ ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಐವರೂ ಕೈದಿಗಳನ್ನು ಒಂದೆಡೆ ಇರಿಸಿಕೊಳ್ಳಲಾಗಿದೆ.