ಇಸ್ಲಾಮಾಬಾದ್(ಪಾಕಿಸ್ತಾನ): ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದರೂ ಕೂಡಾ ಪಾಕಿಸ್ತಾನ ಲಾಕ್ಡೌನ್ ತೆರವುಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈವರೆಗೆ ಅಲ್ಲಿನ ಚೆಕ್ಪೋಸ್ಟ್ಗಳಲ್ಲಿ ಪೊಲೀಸರೊಂದಿಗೆ ಲಾಕ್ಡೌನ್ ನಿರ್ವಹಿಸುತ್ತಿದ್ದ ಪಾಕ್ ಸೇನೆಯ ತಂಡಗಳೂ ತಮ್ಮ ತಮ್ಮ ಬ್ಯಾರಕ್ಗಳಿಗೆ ಮರಳಿವೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ''ಲಾಕ್ಡೌನ್ನ ಹಂತ ಹಂತವಾಗಿ ಹಿಂತೆಗೆದುಕೊಳ್ಳಲಾಗುತ್ತದೆ. ಸರ್ಕಾರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದು, ರಾಷ್ಟ್ರದ ಎಲ್ಲರಿಗೂ ಆರ್ಥಿಕ ಸಹಾಯ ಮಾಡುವುದು ಸಾಧ್ಯವಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ'' ಎಂದ ಎರಡೇ ದಿನದಲ್ಲಿ ಸೇನೆಗಳು ತಮ್ಮ ಬ್ಯಾರಕ್ಗಳಿಗೆ ಮರಳಿವೆ.
ಈವರೆಗೆ ಪಾಕಿಸ್ತಾನದಲ್ಲಿ 27,474 ಮಂದಿಗೆ ಸೋಂಕು ತಗುಲಿದೆ. 618 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 7,756 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಈಗ ಸದ್ಯಕ್ಕೆ 19,100 ಮಂದಿ ಸೋಂಕಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೂ ಲಾಕ್ಡೌನ್ ತೆರವುಗೊಳಿಸಲು ಪಾಕ್ ಸರ್ಕಾರ ಮುಂದಾಗಿದೆ. ವಾಣಿಜ್ಯ ಚಟುವಟಿಕೆಗಳ ಜೊತೆಗೆ ಮಸೀದಿಗಳನ್ನು ತೆರೆಯಲೂ ಕೂಡಾ ಚಿಂತನೆ ನಡೆಸಲಾಗಿದೆ. ಆದರೆ, ಜುಲೈ 15ರವರೆಗೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.