ನವದೆಹಲಿ/ಇಸ್ಲಮಾಬಾದ್: ಪಾಕ್ನಲ್ಲಿರುವ ಸಿಖ್ಖರ ಪವಿತ್ರ ದರ್ಬಾರ್ ಸಾಹಿಬ್ ಗುರುದ್ವಾರದ ಕರ್ತಾರ್ಪುರ ಕಾರಿಡಾರ್ ಯೋಜನೆ ಉದ್ಘಾಟನಾ ಸಮಾರಂಭಕ್ಕೆ ನವಜೋತ್ ಸಿಂಗ್ ಸಿಧುಗೆ ಪಾಕ್ ಆಹ್ವಾನ ನೀಡಿದೆ.
ಮಾಜಿ ಕ್ರಿಕೆಟರ್, ಪಂಜಾಬ್ನ ಮಾಜಿ ಸಚಿವ ನವಜೋತ್ ಸಿಂಗ್ ಸಿಧುಗೆ ಕರ್ತಾರ್ಪುರ ಕಾರಿಡಾರ್ ಯೋಜನೆ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ಪತ್ರಿಕೆ ನೀಡಲು ಪಾಕ್ ನಿರ್ಧರಿಸಿದೆ ಎಂದು ಪಾಕ್ನ ರಾಜಕೀಯ ಪಕ್ಷ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಹೇಳಿದೆ.
ಈಗಾಗಲೇ ಪಾಕ್ನ ಸೆನೆಟ್ ಸದಸ್ಯ ಫೈಸಲ್ ಜಾವೇದ್ ಖಾನ್, ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ದೇಶನದ ಮೇರೆಗೆ ಸಿಧುಗೆ ಕರೆ ಮಾಡಿ, ನವೆಂಬರ್ 9 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಏನಿದು ಕರ್ತಾರ್ಪುರ ಕಾರಿಡಾರ್ ಯೋಜನೆ?
ಸಿಖ್ ಧರ್ಮದ ಸಂಸ್ಥಾಪಕರಾದ ಬಾಬಾ ಗುರುನಾನಕ್ ಅವರು ತಮ್ಮ ಜೀವನದ ಕೊನೆಯ 18 ವರ್ಷವನ್ನು ಈಗಿನ ಪಾಕಿಸ್ತಾನದಲ್ಲಿರುವ ಕರ್ತಾರ್ಪುರದಲ್ಲಿ ಕಳೆದಿದ್ದರು. ಹೀಗಾಗಿ ಕರ್ತಾರ್ಪುರ ಸಿಖ್ ಧರ್ಮದವರಿಗೆ ಪವಿತ್ರ ಸ್ಥಳ. ಭಾರತ ಮತ್ತು ಪಾಕಿಸ್ತಾನ ಗಡಿಯಿಂದ 4 ಕಿ.ಮೀ ದೂರದಲ್ಲಿರುವ ಈ ಸ್ಥಳಕ್ಕೆ ಭಾರತದಲ್ಲಿನ ಸಿಖ್ ಧರ್ಮೀಯರು ವೀಸಾ ರಹಿತವಾಗಿ ಪವಿತ್ರ ಯಾತ್ರೆಗೆ ತೆರಳುವ ಅವಕಾಶ ನೀಡುವ ಸಲುವಾಗಿ ಭಾರತ ಮತ್ತು ಪಾಕಿಸ್ತಾನ ರಾವಿ ನದಿಗೆ ಸೇತುವೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದವು. ಈಗ ಈ ಯೋಜನೆ ಪೂರ್ಣಗೊಂಡಿದ್ದು, ನವೆಂಬರ್ 9ರಂದು ಉದ್ಘಾಟನೆಗೊಳ್ಳಲಿದೆ.