ತಿರುವನಂತಪುರಂ : ಮಾರ್ಚ್ 25ರಂದು ಕೊರೊನಾ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಕೇರಳದಲ್ಲಿ 60ಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಯುವಕರು ಒತ್ತಡ ಎದುರಿಸುತ್ತಿದ್ದಾರೆ ಮತ್ತು ಶಾಲೆಗಳು ಮುಚ್ಚಲ್ಪಟ್ಟ ಕಾರಣ ಸ್ನೇಹಿತರನ್ನು ಭೇಟಿಯಾಗಲು ಸಹ ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ದುಃಖಗಳನ್ನು ಹಂಚಿಕೊಳ್ಳಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಾರ, ಮೊಬೈಲ್ ಫೋನ್ ಬಳಕೆಗೆ ಪೋಷಕರು ಬೈಯುವುದು ಮತ್ತು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ವಿಫಲರಾಗುವುದು ಸೇರಿ ವಿವಿಧ ಕಾರಣಗಳಿಂದಾಗಿ ರಾಜ್ಯದ ಮಕ್ಕಳಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚುತ್ತಿದೆ.
ಇದು ಒತ್ತಡ ಎದುರಿಸುತ್ತಿರುವ ಮಕ್ಕಳಿಗಾಗಿ ದೂರಸಂಪರ್ಕ ಸೌಲಭ್ಯ ಪ್ರಾರಂಭಿಸಲು ಸರ್ಕಾರವನ್ನು ಪ್ರೇರೇಪಿಸಿದೆ. ಈ ವಿಷಯದ ಬಗ್ಗೆ ಅಧ್ಯಯನ ಮಾಡಲು ಆದೇಶಿಸಲಾಗಿದೆ. ಮಾರ್ಚ್ 25ರಿಂದ ರಾಷ್ಟ್ರೀಯ ಲಾಕ್‌ಡೌನ್ ಹೇರಿದ ಬಳಿಕ 18ವರ್ಷಕ್ಕಿಂತ ಕಡಿಮೆ ವಯಸ್ಸಿನ 66 ಮಕ್ಕಳು ವಿವಿಧ ಕಾರಣಗಳಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರು. ಆನ್‌ಲೈನ್ ತರಗತಿಗಳಿಗೆ ಹಾಜರಾಗದ ಕಾರಣ ತಾಯಿ ಮಗುವನ್ನು ಗದರಿಸುವುದು ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೋ ಡೌನ್‌ಲೋಡ್ ಮಾಡಿದ್ದಕ್ಕಾಗಿ ಪೋಷಕರು ಮಗುವನ್ನು ಪ್ರಶ್ನಿಸುವುದು ಅಥವಾ ಪೋಷಕರ ನಡುವಿನ ನಿರಂತರ ಬಿರುಕುಗಳು ಮಕ್ಕಳಲ್ಲಿ ಆತ್ಮಹತ್ಯಾ ಪ್ರವೃತ್ತಿ ಪ್ರಚೋದಿಸುವ ಮುಖ್ಯ ಕಾರಣಗಳಾಗಿವೆ ಎಂದು ಹೇಳಿದರು.
ಲಾಕ್‌ಡೌನ್‌ನಿಂದಾಗಿ ಶಾಲೆಗಳು ಇನ್ನೂ ಪುನಃ ತೆರೆಯದ ಕಾರಣ, ಮಕ್ಕಳು ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಗುವಿನ ಕಲ್ಯಾಣ ಗಮನದಲ್ಲಿಟ್ಟುಕೊಂಡು ಪೋಷಕರು ಮಧ್ಯಪ್ರವೇಶಿಸುತ್ತಿದ್ರೂ, ಈ ಪ್ರಕ್ರಿಯೆಯಲ್ಲಿ ಯುವ ಮನಸ್ಸುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ವಿಜಯನ್ ತಿಳಿಸಿದರು.
ಮಾನಸಿಕ ಒತ್ತಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಸಹಾಯ ಮಾಡಲು, ಸರ್ಕಾರವು 12-18 ವರ್ಷದೊಳಗಿನ ಮಕ್ಕಳೊಂದಿಗೆ ಸಂಪರ್ಕ ಸಾಧಿಸುವ ಯೋಜಿತ ಸಮುದಾಯ ಹಸ್ತಕ್ಷೇಪದ ಮೂಲಕ ನಮ್ಮ ಮಕ್ಕಳ ಜವಾಬ್ದಾರಿ ಕಾರ್ಯಕ್ರಮ (ಒಆರ್‌ಸಿ)ಅಡಿ 'ಚಿರಿಯಾಟೆಲ್-ಕೌನ್ಸೆಲಿಂಗ್ ಉಪಕ್ರಮವನ್ನು ಪ್ರಾರಂಭಿಸಿದೆ ಎಂದು ವಿವರಿಸಿದರು.