ನವದೆಹಲಿ : ಮೇ 1ರಿಂದ ಈವರೆಗೆ 542 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಬರೋಬ್ಬರಿ ಆರು ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಪ್ರವಾಸಿಗರನ್ನು ಭಾರತೀಯ ರೈಲ್ವೆ ಅವರ ರಾಜ್ಯಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪೈಕಿ 448 ರೈಲುಗಳು ಈಗಾಗಲೇ ತಮ್ಮ ನಿಲ್ದಾಣವನ್ನು ತಲುಪಿವೆ. ಆಂಧ್ರಪ್ರದೇಶ (1), ಬಿಹಾರ (117), ಛತ್ತೀಸ್‌ಗಢ್ (1), ಹಿಮಾಚಲಪ್ರದೇಶ(1), ಜಾರ್ಖಂಡ್ (27), ಕರ್ನಾಟಕ (1), ಮಧ್ಯಪ್ರದೇಶ (38), ಮಹಾರಾಷ್ಟ್ರ (3), ಒಡಿಶಾ (29), ರಾಜಸ್ಥಾನ್ (4), ತಮಿಳುನಾಡು (1), ತೆಲಂಗಾಣ (2), ಉತ್ತರಪ್ರದೇಶ (221) ಮತ್ತು ಪಶ್ಚಿಮ ಬಂಗಾಳ (2) ರೈಲುಗಳು ತಲುಪಿವೆ ಎಂದು ಇಲಾಖೆ ತಿಳಿಸಿದೆ.
ಇನ್ನುಳಿದಂತೆ 94 ರೈಲುಗಳು ತಿರುಚ್ಚಿರಪ್ಪಳ್ಳಿ, ಟಿಟ್ಲಗಾರ್ಹ್, ಬಾರೌನಿ, ಖಾಂಡ್ವಾ, ಜಗನ್ನಾಥಪುರ, ಖುರ್ದಾ ರಸ್ತೆ, ಪ್ರಯಾಗರಾಜ್, ಬಾಲಿಯಾ, ಗಯಾ, ಪೂರ್ಣಿಯಾ, ವಾರಣಾಸಿ, ದರ್ಭಂಗಾ, ಗೋರಖ್‌ಪುರ್, ಲಖನೌ, ಕಾಸ್ಟ್ ದಾನಾಪುರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ತಂಗಬೇಕಾದ ರೈಲುಗಳು ಬಾಕಿ ಇವೆ ಎಂದು ಇದೇ ವೇಳೆ ಮಾಹಿತಿ ನೀಡಿದೆ.
ನವದೆಹಲಿಯಿಂದ ಮೇ 12 ರಿಂದ ಹಲವಾರು ನಗರಗಳಿಗೆ 15 ಹವಾನಿಯಂತ್ರಿತ ರೈಲುಗಳನ್ನು ಓಡಿಸುವುದಾಗಿ ಭಾರತೀಯ ರೈಲ್ವೆ ಘೋಷಿಸಿದ ನಂತರ ರೈಲ್ವೆ ಇಲಾಖೆ ಈ ಪ್ರಕಟಣೆ ಹೊರಡಿಸಿದೆ.
ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸಲು ಈ ಹಿಂದೆ 1,200 ಪ್ರಯಾಣಿಕರಿಗೆ ಅನುಮತಿ ನೀಡಲಾಗಿತ್ತು. ಆದರೆ, ಈಗ 1,700 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.