ಬೂಂದೀ (ರಾಜಸ್ಥಾನ): ರಾಜಸ್ಥಾನದ ಬೂಂದೀ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿಯಲ್ಲಿ ಖಾಸಗಿ ಬಸ್ ನದಿಗೆ ಬಿದ್ದು 24 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಿಸಲ್ಪಟ್ಟಿರುವ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ಮದುವೆ ದಿಬ್ಬಣದ ಖಾಸಗಿ ಬಸ್ ಕೋಟಾ ಎಂಬಲ್ಲಿಂದ ಸವಾಯಿ ಮಾಧೋಪುರಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ನಿದ್ರೆ ಮಂಪರಿನಲ್ಲಿ ಚಾಲಕ:
ಪ್ರಾಥಮಿಕ ಮೂಲಗಳ ಪ್ರಕಾರ ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಬಸ್ ನಿಯಂತ್ರಣ ತಪ್ಪಿ ಮೇಜ್ ನದಿಗೆ ಬಿದ್ದಿದೆ. ಪರಿಣಾಮ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ತಕ್ಷಣ ಸ್ಥಳೀಯರು ನದಿಗೆ ಜಿಗಿದು ಹಲವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ತಂಡ ದೌಡಾಯಿಸಿದ್ದು, ನಾಲ್ವರನ್ನು ರಕ್ಷಿಸಲಾಗಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.