ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪ್ರತಿಪಕ್ಷಗಳ ಸಭೆ ಕರೆದಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜೆಎನ್ಯುನಲ್ಲಿ ನಡೆದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲಿನ ಹಲ್ಲೆಯ ಕುರಿತು ಚರ್ಚೆ ನಡೆಯಲಿದೆ.
ಈ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಜರಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡ ಸಭೆಯಿಂದ ದೂರ ಉಳಿದಿದ್ದಾರೆ. ಅಷ್ಟೇ ಅಲ್ಲ ಎಎಪಿ ಸಹ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ಆದ್ರೆ ಕಾಂಗ್ರೆಸ್ ಮೂಲಗಳು ಮಾತ್ರ ಸಭೆಗೆ ಎಲ್ಲ ಪ್ರತಿಪಕ್ಷಗಳು ಬರಲಿವೆ ಎಂದು ಹೇಳಿದೆ. ಈ ಸಭೆಯಲ್ಲಿ ಕಾಂಗ್ರೆಸ್‌ನ ಹೊಸ ಮೈತ್ರಿ ಪಾಲುದಾರ ಶಿವಸೇನೆ ಭಾಗವಹಿಸುವ ನಿರೀಕ್ಷೆಯಿದೆ.
ಶನಿವಾರ ನಡೆದ ಸಭೆಯಲ್ಲಿ ಒಂದು ನಿರ್ಣಯವನ್ನು ತೆಗೆದುಕೊಂಡ ಬಳಿಕ "ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಯುವಕರು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ಮತ್ತು ಅವರನ್ನು ವಿವೇಚನಾರಹಿತರನ್ನಾಗಿ ಮಾಡಲು ಹೊರಟಿದೆ " ಎಂದು ಕಾಂಗ್ರೆಸ್ ಆರೋಪಿಸಿದೆ.
ಸಂವಿಧಾನದ ಮೇಲೆ ಸಂಘಟಿತ ದಾಳಿ, ನಿರುದ್ಯೋಗ, ಶಿಕ್ಷಣದ ವ್ಯಾಪಾರೀಕರಣ, ಶುಲ್ಕ ಹೆಚ್ಚಳ ಮತ್ತು ಯುವಜನ-ವಿದ್ಯಾರ್ಥಿಗಳ ಧ್ವನಿ ಹತ್ತಿಕ್ಕುವುದು ಸ್ವಯಂಪ್ರೇರಿತ ಪ್ರತಿಭಟನೆಗೆ ಕಾರಣವಾಗಿದೆ "ಎಂದು ಸೋನಿಯಾ ಹೇಳಿದ್ದಾರೆ .ಸಿಎಎ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ಸಿ) ಕ್ರಮವನ್ನು ಕೇಂದ್ರ ಸರ್ಕಾರವು ತಕ್ಷಣವೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.