ಇಂದು ಸಂಜೆ 5 ಗಂಟೆಗೆ ಪ್ರತಿಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ - ಪ್ರತಿಪಕ್ಷಗಳಿಂದ ಸಂಸತ್ ಕಲಾಪ ಬಹಿಷ್ಕಾರ
ಕೃಷಿ ಮಸೂದೆ ಮತ್ತು ಸಂಸತ್ ಸದಸ್ಯರ ಅಮಾನತಿನ ಬಗ್ಗೆ ಚರ್ಚಿಸಲು ಪ್ರತಿಪಕ್ಷ ನಾಯಕರು ಇಂದು ರಾಷ್ಟ್ರಪತಿಯನ್ನು ಭೇಟಿಯಾಗಲಿದ್ದಾರೆ.
ನವದೆಹಲಿ: ವಿವಾದಕ್ಕೆ ಸೃಷ್ಟಿಸಿರುವ ಕೃಷಿ ಮಸೂದೆ ಮತ್ತು ಸಂಸತ್ ಸದಸ್ಯರ ಅಮಾನತಿನ ಬಗ್ಗೆ ಚರ್ಚಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲು ಪ್ರತಿಪಕ್ಷಗಳ ನಾಯಕರಿಗೆ ಇಂದು ಸಂಜೆ 5 ಗಂಟೆಗೆ ಸಮಯ ನಿಗದಿಯಾಗಿದೆ.
ಕೋವಿಡ್ ನಿಮಯಾವಳಿಗಳ ಪ್ರಕಾರ, ಕೇವಲ ಐದು ಜನರಿಗೆ ಮಾತ್ರ ರಾಷ್ಟ್ರಪತಿಗಳನ್ನು ಭೇಟಿಯಾಗಲು ಅವಕಾಶ ದೊರೆತಿದೆ. ರಾಷ್ಟ್ರಪತಿ ಭೇಟಿಗೆ ಅವಕಾಶ ನೀಡುವಂತೆ ಈ ಹಿಂದೆ ಪ್ರತಿಪಕ್ಷಗಳು ಕೋರಿದ್ದವು.
ಈ ನಡುವೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಗುಲಾಂ ನಬಿ ಆಜಾದ್ ನಿವಾಸದಲ್ಲಿ ವಿವಿಧ ಪಕ್ಷಗಳ ನಾಯಕರು ಸಭೆ ನಡೆಸಿದರು. ಮೇಲ್ಮನೆಯಲ್ಲಿ ಗುಲಾಂ ನಬಿ ಆಜಾದ್ ಭಾಷಣ ಮಾಡಿದ ಬಳಿಕ ಮಂಗಳವಾರದಿಂದ ಪ್ರತಿಪಕ್ಷ ನಾಯಕರು ಕಲಾಪ ಬಹಿಷ್ಕರಿಸಿ ಸಂಸತ್ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೃಷಿ ಮಸೂದೆ ಮತ್ತು ಎಂಟು ಸಂಸತ್ ಸದಸ್ಯರ ಅಮಾನತನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಕೆಳಮನೆಯ ಕಲಾಪವನ್ನೂ ಬಹಿಷ್ಕರಿಸಿವೆ. ಕಲಾಪ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಸದಸ್ಯರು, ಸಭಾಧ್ಯಕ್ಷರ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.