ನವದೆಹಲಿ: ದೇಶಾದ್ಯಂತ ಅನ್ಲಾಕ್ 4.0 ಜಾರಿಗೊಂಡಿದ್ದು, ಇದರ ಭಾಗವಾಗಿ ದೇಶಾದ್ಯಂತ ಸೆಪ್ಟೆಂಬರ್ 7ರಿಂದ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಕೆಲವೊಂದು ಮಹತ್ವದ ಷರತ್ತು ವಿಧಿಸಲಾಗಿದೆ.
ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ದೇಶಾದ್ಯಂತ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ತಮ್ಮ ಸೇವೆ ಪುನಾರಂಭಿಸಲು ಮೆಟ್ರೋ ಸಜ್ಜುಗೊಂಡಿದ್ದು, ಷರತ್ತುಬದ್ದ ನಿಯಮಗಳೊಂದಿಗೆ ಈ ಸೇವೆ ಆರಂಭಗೊಳ್ಳಲಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹೊರಹಾಕಿದ್ದಾರೆ.
ಬೆಂಗಳೂರು, ದೆಹಲಿ, ನೋಯ್ಡಾ, ಕೊಚ್ಚಿ, ಚೆನ್ನೈ, ಮೆಟ್ರೋ ರೈಲು ಸೆಪ್ಟೆಂಬರ್ 7ರಿಂದ ಸೇವೆ ಆರಂಭ ಮಾಡಲಿದ್ದು, ಮಹಾರಾಷ್ಟ್ರದಲ್ಲಿ ಮಾತ್ರ ಮೆಟ್ರೋ ಸೇವೆ ಆರಂಭ ಮಾಡಲು ಹಿಂದೇಟು ಹಾಕಲಾಗಿದೆ. ಆರಂಭದಲ್ಲಿ ಸೀಮಿತ ನಿಲ್ದಾಣಗಳಲ್ಲಿ ಮಾತ್ರ ಮೆಟ್ರೋ ಸೇವೆ ಆರಂಭಗೊಳ್ಳಲಿದ್ದು, ಕಂಟೈನ್ಮೆಟ್ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿರುವುದಿಲ್ಲ. ಇದರ ಜತೆಗೆ ಹೆಚ್ಚು ಜನರು ಹತ್ತುವ ಸ್ಥಳಗಳಲ್ಲಿ ಮೆಟ್ರೋ ಆರಂಭದಲ್ಲಿ ಸೇವೆ ಸಲ್ಲಿಸುವುದಿಲ್ಲ.
ಯಾವೆಲ್ಲ ಮಾರ್ಗಸೂಚಿ?
- ಕಂಟೈನ್ಮೆಟ್ ಝೋನ್ಗಳಲ್ಲಿ ಮೆಟ್ರೋ ಸಂಚಾರ ಸ್ಥಗಿತ
- ಸೆಪ್ಟೆಂಬರ್ 12ರಿಂದ ಎಲ್ಲ ಮೆಟ್ರೋ ಸಂಚಾರ ಆರಂಭ
- ರೋಗಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ಸಂಚಾರಕ್ಕೆ ಅನುಮತಿ
- ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ಮಾಸ್ಕ್ ಧರಿಸಿಕೊಂಡು ಪ್ರಯಾಣ
- ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕಾಗಿ ರೈಲುಗಳ ಆವರ್ತನ ನಿಯಂತ್ರಣ
- ಆರೋಗ್ಯ ಸೇತು ಆ್ಯಪ್ ಬಳಕೆ ಮಾಡಲು ಸಲಹೆ
- ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಜರ್
- ಸ್ಮಾರ್ಟ್ ಕಾರ್ಡ್ ಮೂಲಕ ಮೆಟ್ರೋ ಪ್ರಯಾಣಕ್ಕೆ ಒತ್ತು, ಆರಂಭದಲ್ಲಿ ಟೋಕನ್ ಬಳಕೆ