ನವದೆಹಲಿ: ರಾಷ್ಟ್ರವ್ಯಾಪಿ ಹಬ್ಬಿರುವ ಕೊರೊನಾದಿಂದಾಗಿ ಕೇಂದ್ರ ಲಾಕ್‌ಡೌನ್ ಘೋಷಣೆ ಮಾಡಿದ್ದು, ಜನರ ಜೀವನ ಮಾತ್ರವಲ್ಲದೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆಯೂ ಹೊಡೆತ ಬಿದ್ದಿದೆ. ಶಿಕ್ಷಣ, ಆರ್ಥಿಕತೆ ಮತ್ತಿತರ ಅವಶ್ಯಕತೆಗಳ ಮೇಲೆ ಗಮನ ಹರಿಸುತ್ತಾ ಹೋದರೆ ಜನರ ಜೀವವನ್ನೇ ಈ ವೈರಸ್ ಬಲಿ ಪಡೆದುಕೊಳ್ಳಲಿದೆ ಎಂಬ ಆತಂಕದಿಂದ ಲಾಕ್‌ಡೌನ್ ಮಾಡಲಾಯಿತು. ಆದರೆ, ಇದರಿಂದಾಗಿ ತೀವ್ರ ಸಂಕಷ್ಟ ಎದುರುಸಿತ್ತಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ಮಾರ್ಗವಾಗಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುವ ದಾರಿ ಕಂಡುಕೊಂಡ ಸರ್ಕಾರ, ಒಂದು ಸಮಿತಿಯನ್ನು ರಚಿಸಿ ಈ ಬಗ್ಗೆ ಮಾಹಿತಿ ನೀಡಲು ಕೋರಿದೆ.
ದೀರ್ಘಕಾಲದ ಲಾಕ್ಡೌನ್ನಿಂದಾಗಿ ವಿವಿಧ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯುತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು, ಬಾಕಿ ಇರುವ ಪರೀಕ್ಷೆಗಳು ಹೇಗೆ ನಡೆಯುತ್ತವೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾದರೂ ಹೇಗೆ? ಎಂಬುದರ ಕುರಿತು ಇನ್ನೂ ಪರಿಹಾರ ದೊರೆಯದ ಹಿನ್ನೆಲೆ, ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ವಿಷಯದ ಸಕಾರಾತ್ಮಕ ಬೆಳವಣಿಗೆಗಾಗಿ ಕಾಯುತ್ತಿದ್ದಾರೆ.
ಈ ಮಧ್ಯೆ, ವಿಶ್ವವಿದ್ಯಾನಿಲಯದ ಆಯೋಗವು ಏಪ್ರಿಲ್ 24 ರಂದು ಆನ್‌ಲೈನ್ ಪರೀಕ್ಷೆ ನಡೆಸುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಹರಿಯಾಣ ವಿಶ್ವವಿದ್ಯಾಲಯದ ಉಪಕುಲಪತಿ ಆರ್.ಸಿ.ಕುಹಾದ್ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ.
ಈ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಂದಿನ ವಾರದಲ್ಲಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಪರೀಕ್ಷೆಗಳನ್ನು ನಡೆಸಲು ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.
ತಜ್ಞರ ಸಮಿತಿಯು ಆನ್‌ಲೈನ್ ಪರೀಕ್ಷೆಗಳ ಸಾಧಕ ಬಾದಕ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ನೋಡಬೇಕಾಗುತ್ತದೆ. ಆದಾಗ್ಯೂ, ಅವರು ಹೊಂದಿರುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಆಧಾರದ ಮೇಲೆ ಆನ್‌ಲೈನ್ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಬೇಕು ಬೇಡವೋ ಎಂದು ತಜ್ಞರು ಸೂಚಿಸಲಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಮತ್ತು ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕು ಅಥವಾ ಬೇರೆ ಯಾವುದಾದರೂ ಸ್ವರೂಪದಲ್ಲಿ ಅವರು ತಮ್ಮ ವಿದ್ಯಾರ್ಥಿಗಳ ಸಾಧನೆಯ ಮೌಲ್ಯಮಾಪನ ಮಾಡಲು ಉತ್ತಮವಾದ ದಾರಿ ಕಂಡುಕೊಳ್ಳಬೇಕು ಎಂದು ಟೆರಿ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಉಪಕುಲಪತಿ ಮಣಿಪದ್ಮಾ ದತ್ತ ಸಲಹೆ ನೀಡಿದ್ದಾರೆ.
ಆನ್‌ಲೈನ್ ಪರೀಕ್ಷೆಗಳನ್ನು ನಡೆಸಲು ಮೂಲಸೌಕರ್ಯ ಹೊಂದಿರುವ ದೇಶಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿವೆ, ಅವುಗಳಲ್ಲಿ ಹೆಚ್ಚಿನವು ನಗರ ಪ್ರದೇಶ ಮತ್ತು ಮೆಟ್ರೋ ನಗರಗಳಲ್ಲಿವೆ. ಆದರೆ, ದೂರದ ಅಥವಾ ಗ್ರಾಮೀಣ ಪ್ರದೇಶಗಳಲ್ಲಿರುವ ಸಂಸ್ಥೆಗಳು ಸರಿಯಾದ ಸಂಪರ್ಕವನ್ನು ಹೊಂದಿರದ ಕಾರಣ ಆನ್‌ಲೈನ್ ಪರೀಕ್ಷೆ ಸವಾಲನ್ನು ಎದುರಿಸಬೇಕಾಗುತ್ತದೆ. ಅದಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಹ ಆನ್‌ಲೈನ್ ಮಾಧ್ಯಮದಿಂದಾಗಿ ಹೆಚ್ಚು ಸಂಕಷ್ಟಪಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಇನ್ನು ಪ್ರೊ.ದತ್ತ, ಈ ಬಗ್ಗೆ ತಮ್ಮ ಅಭಿಪ್ರಾಯ ನೀಡಿದ್ದು, ಈ ಪರೀಕ್ಷೆಗೆ ಎರಡು ವಿಭಿನ್ನ ವರ್ಗಗಳನ್ನು ಬೇರ್ಪಡಿಸಬೇಕು. ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಯಿರುವ ಹಾಗೂ ಆನ್‌ಲೈನ್ ಪರೀಕ್ಷೆ ನಡೆಸಲು ಸಾಧ್ಯವಿರದ ವಿಶ್ವವಿದ್ಯಾಲಯಗಳನ್ನು ಮೊದಲು ಗುರುತಿಸಬೇಕಿದೆ, ನಂತರ ನಿರ್ದೇಶನ ತತ್ವಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳಿಗೆ ಅಧಿಕಾರ ನೀಡಬೇಕು.
ಗ್ರಾಮೀಣ ಪ್ರದೇಶಗಳಿಗೆ ಮತ್ತು ಸರಿಯಾದ ಸಂಪರ್ಕ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುವ ನಗರ ಪ್ರದೇಶಗಳಲ್ಲಿರುವ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಬೇಕು. ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುವವರಿಗೆ ಸ್ವಾಯತ್ತತೆ ನೀಡಿ, ಗ್ರಾಮೀಣ ಭಾಗದ ವಿದ್ಯಾ ಸಂಸ್ಥೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೆಲವು ನಿರ್ದೇಶನ ತತ್ವಗಳ ಆಧಾರದ ಮೇಲೆ ಗೌರವಿಸಬೇಕು ಎಂದು ಪ್ರೊ. ದತ್ತಾ ಅಭಿಪ್ರಾಯಪಟ್ಟಿದ್ದಾರೆ.
ಲಾಕ್ ಡೌನ್ ಘೋಷಣೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚಿಂತಾಕ್ರಾಂತರಾಗಿದ್ದು, ಒಂದು ವೇಳೆ ಈ ವೈರಸ್ ಹೀಗೆ ಮುಂದುವರಿದರೆ ವಿದ್ಯಾಭ್ಯಾಸದ ಗತಿ ಏನು ಎಂದು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ಸಾಮಾನ್ಯವಾಗಿ, ಪರೀಕ್ಷೆಗಳನ್ನು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಹೊಸ ಶೈಕ್ಷಣಿಕ ವರ್ಷವು ಸಾಮಾನ್ಯವಾಗಿ ಉನ್ನತ ಶಿಕ್ಷಣಕ್ಕಾಗಿ ಜುಲೈ-ಆಗಸ್ಟ್‌ನಿಂದ ಪ್ರಾರಂಭವಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ, ಸಾಮಾನ್ಯ ಶೈಕ್ಷಣಿಕ ಚಕ್ರವು ಈಗಾಗಲೇ ತೊಂದರೆಗೆ ಸಿಲುಕಿಕೊಂಡಿದೆ.
ಒಟ್ಟಾರೆಯಾಗಿ ಕೊರೊನಾ ವೈರಸ್ ಮಹಾಮಾರಿ ನಡುವೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿ ಜೀವನದ ಹಿತದೃಷ್ಠಿಯಿಂದ ಆನ್‌ಲೈನ್ ಪರೀಕ್ಷೆ ನಡೆಸುವ ಬಗ್ಗೆ ಸಮಿತಿ ರಚಿಸಿ ವರದಿ ನೀಡುವಂತೆ ಸರ್ಕಾರ ಕೇಳಿದ್ದು, ತಜ್ಞರ ವರದಿಯಿಂದಾಗಿ ಆನ್‌ಲೈನ್ ಪರೀಕ್ಷೆಯೋ ಅಥವಾ ಪೆನ್ನು-ಪೇಪರ್ ಪರೀಕ್ಷೆಯೋ ನಿರ್ಧಾರವಾಗಬೇಕಿದೆ.