ಬಾರ್ಮರ್ (ರಾಜಸ್ಥಾನ) : ಕೊರೊನಾ ವೈರಸ್ ಕಾಟದಿಂದಾಗಿ ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮರೆಯಾಗಿದ್ದು, ಅನಿವಾರ್ಯವೆಂಬಂತೆ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಶಿಕ್ಷಣಕ್ಕೆ ಮೊರೆ ಹೋಗಿವೆ. ಆದರೆ, ಇದು ಮಕ್ಕಳು ಹಾಗೂ ಪೋಷಕರ ಮಾನಸಿಕ ನೆಮ್ಮದಿ ಕಸಿದಿದೆ. ಇದ್ರಿಂದ ಮಕ್ಕಳಿಗೆ ಪ್ರಯೋಜನಕ್ಕಿಂತ ಸಮಸ್ಯೆಯೇ ಹೆಚ್ಚು ಎಂಬುದು ಪೋಷಕರ ಗೋಳು.
ಆನ್‌ಲೈನ್ ಅಧ್ಯಯನಕ್ಕಾಗಿ ಪ್ರತಿದಿನ ಮೊಬೈಲ್ ಅಥವಾ ಲ್ಯಾಪ್ಟಾಪ್ ಮುಂದೆ ಕೂರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ದೂರುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಮಕ್ಕಳ ಪಾಲಕರು ಹಾಗೂ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಶಾಲಾ ಆಡಳಿತ ಮಂಡಳಿಯ ಒತ್ತಡದಿಂದಾಗಿ ಅವರು ಅಸಹಾಯಕರಾಗಿದ್ದಾರೆ. ಕೆಲವೊಮ್ಮೆ ಪಾಠ ಅರ್ಥವಾಗದ ಸಂದರ್ಭದಲ್ಲಿ ಅಧ್ಯಾಪಕರ ಬಳಿ ಯಾವುದೇ ಗೊಂದಲ ಅಥವಾ ಸ್ಪಷ್ಟೀಕರಣಗಳನ್ನು ಕೇಳಲು ಸಾಧ್ಯವಿಲ್ಲ ಎಂಬುದು ಮಕ್ಕಳ ಅಳಲು. ಅದರ ನಡುವೆ ನೆಟ್‌ವರ್ಕ್ ಸಮಸ್ಯೆ ಮಕ್ಕಳಳಿಗೆ ಆನ್‌ಲೈನ್ ತರಗತಿಗಳ ಬಗ್ಗೆ ಜಿಗುಪ್ಸೆ ಮೂಡಿಸಿದೆ.
ರಾಜಸ್ಥಾನದ ಬಾರ್ಮರ್ ಗಡಿ ಜಿಲ್ಲೆಯಲ್ಲೂ ಇದೇ ಸಮಸ್ಯೆ. ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೊಬೈಲ್ ನೆಟ್‌ವರ್ಕ್ ಒಂದು ದೊಡ್ಡ ಸಮಸ್ಯೆ ಎನ್ನುತ್ತಾರೆ ಪಾಲಕರಾದ ದಾಲು ರಾಮ್ ಚೌಧರಿ. ಈ ಭಾಗದಲ್ಲಿ ಜನರ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಹೀಗಾಗಿ ಅವರು ತಮ್ಮ ಮಕ್ಕಳಿಗೆ ಮೊಬೈಲ್ ಫೋನ್ ಖರೀದಿಸುವುದೇ ದೊಡ್ಡ ಮಾತಾಗಿದೆ ಎನ್ನುತ್ತಾರೆ ರಾಮ್ ಚೌಧರಿ.
ಗ್ರಾಮೀಣ ಪ್ರದೇಶಗಳಲ್ಲಿ ಆನ್‌ಲೈನ್ ಬೋಧನೆ ಸುಲಭದ ಮಾತಲ್ಲ. ಇಲ್ಲಿನ ಬಡ ಕುಟುಂಬಗಳ ಮಕ್ಕಳಲ್ಲಿ ಫೋನ್ ಇಲ್ಲ. ಹೀಗಾಗಿ ಅವರು ಆನ್‌ಲೈನ್ ಮೂಲಕ ಅಧ್ಯಯನ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಪೋಷಕರು. ನಾವು ವಾಸಿಸುತ್ತಿರುವ ಪ್ರದೇಶದಲ್ಲಿ ನೆಟ್‌ವರ್ಕ್ ದೊಡ್ಡ ಸಮಸ್ಯೆ. ಇಂಟರ್ನೆಟ್ ತುಂಬಾ ದೂರದ ಮಾತು ಎನ್ನುತ್ತಾರೆ ಇಲ್ಲಿನ ನಿವಾಸಿ ಪ್ರವೀಣ್ ಬೋತ್ರಾ.
ಈ ನಿಟ್ಟಿನಲ್ಲಿ ಈಟಿವಿ ಭಾರತವು ಮನೋವೈದ್ಯ ಡಾ. ಆರ್ ಕೆ ಸೋಲಂಕಿ ಅವರೊಂದಿಗೆ ಮಾತನಾಡಿದ್ದು, ಅವರ ಪ್ರಕಾರ ಆನ್‌ಲೈನ್ ತರಗತಿಗಳು ಮಾನಸಿಕ ಒತ್ತಡ ಹೆಚ್ಚಿಸುತ್ತವೆ. ಹೀಗಾಗಿ ಮಕ್ಕಳು ತಮ್ಮ ಪಾಠಗಳತ್ತ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಆನ್‌ಲೈನ್ ತರಗತಿಗಳು ದೈಹಿಕ ಬಳಲಿಕೆಗೂ ಕಾರಣವಾಗುತ್ತವೆ ಎಂದು ಡಾ. ಸೋಲಂಕಿ ಹೇಳುತ್ತಾರೆ.
ಮಕ್ಕಳಿಗೆ ಶಿಕ್ಷಣವನ್ನು ನೀಡುವ ಸಾಂಪ್ರದಾಯಿಕ ವಿಧಾನಕ್ಕೆ ಯಾವುದೇ ಪರ್ಯಾಯವಿಲ್ಲ. ಆದರೆ ಕೊರೊನಾ ಸನ್ನಿವೇಶದಲ್ಲಿ ಈ ಸಾಂಪ್ರದಾಯಿಕ ವಿಧಾನ ಕಷ್ಟಸಾಧ್ಯ. something is better than nothing ಅನ್ನೋ ಹಾಗೆ ಸಾಧ್ಯವಾದಷ್ಟು ಮಟ್ಟಿಗಾದರೂ ಈ ವಿಧಾನ ಅನುಸರಿಸುವುದು ಉತ್ತಮ. ಆದ್ದರಿಂದ, ಮಕ್ಕಳು ಹಾಗೂ ಪೋಷಕರು ಆನ್‌ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿದೆ. ಆದರೆ, ಇದು ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಒಳಗೊಂಡಿರುವುದಂತೂ ಸತ್ಯ. ಹೀಗಾಗಿ, ಆನ್‌ಲೈನ್ ಶಿಕ್ಷಣವು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಕಬ್ಬಿಣದ ಕಡಲೆಯಾಗಿದೆ.