ಶ್ರೀನಗರ: ಕಳೆದ ವರ್ಷ ಭಾರತ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಪಡಿಸಿದ ನಂತರ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ಫ್ಯೂ ಸೇರಿದಂತೆ ಸಂವಹನಕ್ಕೂ ಕೆಲ ನಿಬಂಧನೆಗಳನ್ನು ಜಾರಿಗೊಳಿಸಿತು.
ಜಮ್ಮು ಮತ್ತು ಕಾಶ್ಮೀರ ಆಡಳಿತದ ಪ್ರಕಾರ, ಇಲ್ಲಿ ಪ್ರತಿಭಟನೆಯ ಭೀತಿಯಿಂದ ಲ್ಯಾಂಡ್‌ಲೈನ್, ಮೊಬೈಲ್ ಫೋನ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ಸತತ ಏಳು ತಿಂಗಳ ನಿಬಂಧನೆಗಳ ನಂತರ ಇಲ್ಲಿ ಇಂಟರ್ನೆಟ್ ಸ್ಥಗಿತವನ್ನು ತೆಗೆದುಹಾಕಲಾಗಿದೆ. ಬಳಿಕ 2ಜಿ ವೇಗದ ಇಂಟರ್ನೆಟ್ ಜಾರಿಯಲ್ಲಿದೆ. ಇದೇ ಸ್ಪೀಡ್ನ ಇಂಟರ್ನೆಟ್ ಅನ್ನು ಇಲ್ಲಿಯ ಜನ ಒಂದು ವರ್ಷದಿಂದ ಬಳಸುತ್ತಿದ್ದಾರೆ. ಹೈಸ್ಪೀಡ್ (4ಜಿ) ಇಂಟರ್ನೆಟ್ ಅನ್ನು ಸ್ಥಾಪಿಸುವ ಭರವಸೆ ನೀಡಲಾಗಿತ್ತಾದರೂ, ಇನ್ನೂ ಮರುಸ್ಥಾಪಿಸಲಾಗಿಲ್ಲ.
ಇದರಿಂದಾಗಿ, ವಿದ್ಯಾರ್ಥಿಗಳು, ಪತ್ರಕರ್ತರು, ಉದ್ಯಮಿಗಳು, ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಜನರು, ವೈದ್ಯರು ಹಾಗೂ ಇತರ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಏಳು ತಿಂಗಳ ನಂತರ ಕಣಿವೆ ನಾಡಿನಲ್ಲಿ ಸರ್ಕಾರವು ಅಂತರ್ಜಾಲವನ್ನು ಪುನಃಸ್ಥಾಪಿಸಿದಾಗ, ಹೆಚ್ಚಿನ ವೇಗದ ನೆಟ್ವರ್ಕ್ ಅನ್ನು ಮರುಸ್ಥಾಪಿಸಲಾಗುವುದು ಎಂಬ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಅದನ್ನು ಮಾಡಲಾಗಿಲ್ಲ ಎಂದು ಪತ್ರಕರ್ತರಾದ ವಾಸಿಮ್ ನಬಿ ದೂರಿದ್ದಾರೆ. ಅಲ್ಲದೇ ಇದು ವಿಷಾದನೀಯ ಮಾತ್ರವಲ್ಲದೇ ಖಂಡನೀಯವೂ ಆಗಿದೆ ಎಂದು ಅವರು ಹೇಳಿದ್ದಾರೆ.