ಹೊಸದಿಲ್ಲಿ: ಕೋವಿಡ್-19 ಇಡೀ ಜಗತ್ತಿನಲ್ಲೇ ಮರಣ ಮೃದಂಗ ಬಾರಿಸುತ್ತಿರುವ ಬೆನ್ನಲ್ಲೇ ಇದರ ನಿವಾರಣೆಗಾಗಿ ವ್ಯಾಕ್ಸಿನ್ ಕಂಡು ಹಿಡಿಯುವ ಪ್ರಯತ್ನಗಳು ವಿಶ್ವಾದ್ಯಂತ ಭರದಿಂದ ಸಾಗಿವೆ. ಮುಂದಿನ 12 ರಿಂದ 18 ತಿಂಗಳೊಳಗೆ ಈ ಮಹಾಮಾರಿಗೆ ವ್ಯಾಕ್ಸಿನ್ ಸಿದ್ಧವಾಗಬಹುದು ಎಂದು ಅಂದಾಜಿಸಲಾಗಿದೆ.
ಒಂದು ವ್ಯಾಕ್ಸಿನ್ ಸಿದ್ಧಪಡಿಸಲು ಒಂದು ವರ್ಷ ಸುದೀರ್ಘವಾಯಿತು ಎಂದುಕೊಳ್ಳುವ ಹಾಗಿಲ್ಲ. ವ್ಯಾಕ್ಸಿನ್ ಸಂಶೋಧನೆಯ ಕಾರ್ಯವು ತೀರಾ ಸಂಕೀರ್ಣವಾದುದರಿಂದ ಅದನ್ನು ಒಂದು ವರ್ಷದೊಳಗೆ ಕಂಡು ಹಿಡಿದಲ್ಲಿ ಮಹತ್ಸಾಧನೆಯೇ ಹೌದು. ಮೊದಲಿನ ಕಾಲದಲ್ಲಿ ಒಂದು ವ್ಯಾಕ್ಸಿನ್ ತಯಾರಿಕೆಗೆ ಅನೇಕ ವರ್ಷಗಳೇ ಹಿಡಿಯುತ್ತಿದ್ದವು. ಆದರೆ ಈಗಿನ ಮುಂದುವರಿದ ವಿಜ್ಞಾನ ಹಾಗೂ ತಂತ್ರಜ್ಞಾನಗಳಿಂದಾಗಿ ಕೆಲವು ತಿಂಗಳಲ್ಲೆ ವ್ಯಾಕ್ಸಿನ್ ಸಿದ್ಧಪಡಿಸಬಹುದಾಗಿದೆ.
ಮಾನವನ ಸಹಜ ರೋಗ ಪ್ರತಿರೋಧಕ ಶಕ್ತಿಯ ಆಧಾರದಲ್ಲೇ ವ್ಯಾಕ್ಸಿನ್ ಅಭಿವೃದ್ಧಿಪಡಿಸಲಾಗುತ್ತದೆ. ವ್ಯಾಕ್ಸಿನ್ ಮೊದಲಿಗೆ ವೈರಸ್ ಅನ್ನು ಗುರುತಿಸಿ, ನಂತರ ಅದರೊಂದಿಗೆ ಹೋರಾಡಿ ಸಾಯಿಸುತ್ತದೆ. ವ್ಯಾಕ್ಸಿನ್ಗಳು ಮಾನವ ದೇಹದೊಳಗೆ ಅಲ್ಪ ಪ್ರಮಾಣದ ವೈರಸ್ ಮಾಹಿತಿಯನ್ನು ಬಿಡುಗಡೆ ಮಾಡುತ್ತವೆ. ಇದರಿಂದ ದೇಹ ವೈರಸ್ನೊಂದಿಗೆ ಹೋರಾಡುವ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.
ಜಗತ್ತು ಮತ್ತೆ ಮೊದಲಿನಂತೆ ಕಾರ್ಯ ನಿರ್ವಹಿಸುವಂತಾಗಲು ಕೋವಿಡ್-19 ವ್ಯಾಕ್ಸಿನ್ಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.