ನವದೆಹಲಿ: ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ದೇಶಾದ್ಯಂತ ಮುಂದಿನ ವರ್ಷ ಜೂನ್ 1ರಿಂದ ಜಾರಿಯಾಗಲಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಈ ವ್ಯವಸ್ಥೆಯಡಿ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಬಹುದಾಗಿದೆ.

ಒಂದು ಕುಟುಂಬ ಅಥವಾ ವ್ಯಕ್ತಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಸಸ್ಥಳ ಬದಲಿಸಿದರೂ ಯಾವ ಬಡವರೂ ಪಿಡಿಎಸ್ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಉದ್ದೇಶವನ್ನು ಹೊಂದಿದೆ. ಅಲ್ಲದೆ, ನಕಲಿ ಪಡಿತರ ಚೀಟಿದಾರರನ್ನು ಪಟ್ಟಿಯಿಂದ ಹೊರಹಾಕಲು ಸಹ ಇದು ನೆರವಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸರಕಾರವು ಜಿಎಸ್‌ಟಿಐಎನ್ ಮಾದರಿಯಲ್ಲೇ ಐಎಂಪಿಡಿಎಸ್(ಇಂಟಿಗ್ರೇಡೆಸ್ ಮ್ಯಾನೇಜ್‌ಮೆಂಟ್ ಆಫ್ ಪಿಡಿಎಸ್) ಎಂಬ ಆನ್‌ಲೈನ್ ಡೇಟಾಬೇಸ್ ನಿರ್ಮಿಸಲಿದೆ. ಆ ಮೂಲಕ ಪಡಿತರ ವ್ಯವಸ್ಥೆಯನ್ನು ನಿರ್ವಹಿಸಲಿದೆ.
ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರಾದಲ್ಲಿ ಈಗಾಗಲೇ ಐಎಂಪಿಡಿಎಸ್ ಜಾರಿಯಲ್ಲಿದೆ. ಈ ರಾಜ್ಯಗಳ ಫಲಾನುಭವಿಗಳು ತಮ್ಮ ಜಿಲ್ಲೆಯ ಯಾವುದೇ ಪಡಿತರ ಅಂಗಡಿಗಳಿಂದ ಆಹಾರ ಧಾನ್ಯ ಖರೀದಿಸಬಹುದಾಗಿದೆ.