ಅನಂತಪುರಂ(ಆಂಧ್ರ ಪ್ರದೇಶ): ವಿದ್ಯುತ್ ತಂತಿ ಕೈಯಲ್ಲಿ ಹಿಡಿದರೆ ಮಾತ್ರ ವಿದ್ಯುತ್ ಶಾಕ್ ಹೊಡೆಯುತ್ತಿಲ್ಲ. ಬದಲಾಗಿ ವಿದ್ಯುತ್ ಬಿಲ್ ನೋಡಿದ್ರು ಒಮ್ಮೊಮ್ಮೆ ಶಾಕ್ ಹೊಡೆಯುತ್ತೆ ಎಂಬುದಕ್ಕೆ ಇದೇ ಸಾಕ್ಷಿ. ಸಾಮಾನ್ಯ ಮನೆಗೆ 100 ರೂಪಾಯಿ ವಿದ್ಯುತ್ ಬಿಲ್ ಇಲ್ಲವೆ ಹೆಚ್ಚು ವಿದ್ಯುತ್ ಬಳಸಿದರೆ ಸಾವಿರ ರೂಪಾಯಿ ಬಿಲ್ ಬರುತ್ತದೆ. ಆದರೆ ಅನಂತಪುರಂ ಜಿಲ್ಲೆಯ ಕಣೇಕಲ್ಲು ಎಂಬಲ್ಲಿ ಕೂಲಿ ಮಾಡುವ ವೃದ್ಧೆಗೆ ಒಂದೂವರೆ ಲಕ್ಷ ವಿದ್ಯುತ್ ಬಿಲ್ ಬಂದಿದೆ.
ಕುರುಬ ಕಾಮಾಕ್ಷಮ್ಮ ಎಂಬ ವೃದ್ಧೆಗೆ ಬರೋಬ್ಬರಿಗೆ 1,49,034 ವಿದ್ಯುತ್ ಬಿಲ್ ಬಂದಿದೆ. ಪ್ರತಿ ತಿಂಗಳು 100 ರೂಪಾಯಿ ಬರುತ್ತಿದ್ದ ಬಿಲ್ ಏಕಾಏಕಿ 1 ಲಕ್ಷ ರೂಪಾಯಿ ದಾಟಿರುವುದಕ್ಕೆ ಕಾಮಾಕ್ಷಮ್ಮಗೆ ಶಾಕ್ ಹೊಡೆದಂತಾಗಿದೆ.
ನನಗೆ ಪ್ರತಿ ತಿಂಗಳು ನೂರು ರೂಪಾಯಿಗಿಂತ ಕಡಿಮೆ ವಿದ್ಯುತ್ ಬಿಲ್ ಬರುತ್ತದೆ. ಮನೆಯಲ್ಲಿ ಕೇವಲ ಮೂರು ಬಲ್ಬ್, ಎರಡು ಫ್ಯಾನ್‌ಗಳು ಇವೆ. ಇಡೀ ಜೀವನ ಪರ್ಯಂತ ವಿದ್ಯುತ್ ಬಳಸಿದ್ರೂ ಇಷ್ಟೊಂದು ಮೊತ್ತ ಬರುವುದಿಲ್ಲ ಎಂದು ಕಾಮಕ್ಷಮ್ಮ ತಿಳಿಸಿದ್ದಾರೆ.
ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಈಕೆ ದುಬಾರಿ ಮೊತ್ತದ ಬಿಲ್ ಪಾವತಿಸಲಾಗದೆ ಸದ್ಯ ವಿದ್ಯುತ್ ಇಲಾಖೆಗೆ ಅಲೆಯುವಂತಾಗಿದೆ. ಇನ್ನು, ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೆ ತಾಂತ್ರಿಕ ಸಮಸ್ಯೆಯಿಂದ ಇಂತಹ ತಪ್ಪು ನಡೆದಿದೆ. ವೃದ್ಧೆ ಉಪಯೋಗಿಸಿರುವ ಯೂನಿಟ್‌ಗಳನ್ನು ಆಧರಿಸಿ ವಿದ್ಯುತ್ ಬಿಲ್ ಬರುವಂತೆ ಮಾಡುತ್ತೇವೆಂಬ ಭರವಸೆ ನೀಡಿದ್ದಾರೆ.