ಹೈದರಾಬಾದ್(ತೆಲಂಗಾಣ): ಕೋಮು ದ್ವೇಷ ಹರಡುವ ನಿಟ್ಟನಲ್ಲಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ವ್ಯಕ್ತಿಯೋರ್ವನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಸಮಾಜದಲ್ಲಿ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಿ, ನೆಮ್ಮದಿಯ ನೆಲದಲ್ಲಿ ಮತೀಯ ವಿಷ ಬೀಜವನ್ನು ಸಾಮಾಜಿಕ ಜಾಲತಣದ ಮೂಲಕ ಹಬ್ಬಿಸುವವರ ಬಗ್ಗೆ ನಿಗಾ ಇಡಿ ಹಾಗೂ ಅವರನ್ನು ನಂಬಬೇಡಿ ಎಂದು ತೆಲಂಗಾಣ ಪೊಲೀಸರು ಈ ಹಿಂದೆಯೇ ಹೇಳಿದ್ದು, ಅಂತವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ಹೈದರಾಬಾದ್ನ ಪೊಲೀಸ್ ಕಮೀಷನರ್ ಅಂಜನಿ ಕುಮಾರ್ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರು ಯಾರಾದರೂ ಸರಿಯೇ ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಸದ್ಯ ಒಬ್ಬ ಆರೋಪಿಯನ್ನು ಬಂಜಾರ ಹಿಲ್ಸ್ ವ್ಯಾಪ್ತಿಯಲ್ಲಿರುವ ಠಾಣೆಯಲ್ಲಿ ಬಂಧಿಸಿ ಆತನ ವಿರುದ್ದ ಐಪಿಸಿ ಸೆಕ್ಷನ್ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
ಪೊಲೀಸ್ ಇಲಾಖೆ ವತಿಯಿಂದ ಸಾಮಾಜಿಕ ಜಾಲತಾಣದ ಗ್ರೂಪ್ ಅಡ್ಮಿನ್ಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಗುಂಪಿನಲ್ಲಿ ಬರುವ ಸಂದೇಶಗಳು ಯಾವುದೇ ಕೋಮಿನ ಹಿಂಸಾಚಾರಕ್ಕೆ ಕಾರಣವಾಗಬಾರದು ಎಂದು ಸೂಚನೆ ನೀಡಲಾಗಿದೆ.