ನವ ದೆಹಲಿ: ಐದು ದಿನಗಳ ಚೀನಾ ಪ್ರವಾಸದಲ್ಲಿರುವ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್, ಪಿಎಲ್‌ಎ ಗ್ರೌಂಟ್ ಫೋರ್ಸ್ ಕಮಾಂಡರ್ ಜನರಲ್ ಹಾನ್ ವಿಗೋ ಅವರನ್ನು ಭೇಟಿ ಮಾಡಿದರು.
ಪ್ರಾದೇಶಿಕ ಭದ್ರತೆ, ಜಂಟಿ ತರಬೇತಿ, ಮತ್ತು ಗಡಿಗಳಲ್ಲಿ ಶಾಂತಿ ಹಾಗೂ ನೆಮ್ಮದಿ ಹೆಚ್ಚಿಸುವ ಕ್ರಮಗಳಿಗೆ ಅಗತ್ಯವಿರುವ ಕಾರ್ಯತಂತ್ರಗಳ ಕುರಿತು ಉಭಯ ನಾಯಕರು ಚರ್ಚಿಸಿದರು.
ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್, ಉನ್ನತ ಮಟ್ಟದ ಮಿಲಿಟರಿ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ. ಬೀಜಿಂಗ್, ಚೆಂಗ್ಡು, ಉರುಮ್ಕಿ ಮತ್ತು ಶಾಂಘೈನಲ್ಲಿನ ಪ್ರಮುಖ ಮಿಲಿಟರಿ ಮತ್ತು ನಾಗರಿಕ ಸಂಸ್ಥೆಗಳಿಗೆ ಭೇಟಿ ನೀಡಿ ಮುಂದಿನ ಕ್ರಮಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಲೆಫ್ಟಿನೆಂಟ್ ಜನರಲ್ ರಣಬೀರ್ ಚೀನಾಗೆ ಭೇಟಿ ನೀಡಿದ ಎರಡನೇ ಉತ್ತರ ಆರ್ಮಿ ಕಮಾಂಡರ್ ಆಗಿದ್ದಾರೆ. ಈ ಮೊದಲು 2015 ರಲ್ಲಿ ಲೆಫ್ಟಿನೆಂಟ್ ಜನರಲ್ ಭೇಟಿ ನೀಡಿದ್ದರು.
ಈ ಭೇಟಿ ಉಭಯ ದೇಶಗಳ ನಡುವಿನ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುವ ಮೂಲಕ ಒಂದು ಮೈಲಿಗಲ್ಲಾಗಿ ಕಾರ್ಯನಿರ್ವಹಿಸಲಿದೆ. ಉನ್ನತ ಮಟ್ಟದ ಮಿಲಿಟರಿ ಸಹಕಾರ ದೊರೆಯಲಿದೆ ಮತ್ತು ಎರಡೂ ದೇಶಗಳ ಗಡಿ ಸಮಸ್ಯೆ ಸ್ಥಿರಗೊಳ್ಳಲಿದೆ.