ಜೈಪುರ (ಒಡಿಶಾ): ಕೊರೊನಾ ತಂದಿಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ಎಷ್ಟೋ ಜನರು ತಮ್ಮ ಕುಟುಂಬವನ್ನು ನೋಡಲಾಗದೇ ಒದ್ದಾಡುತ್ತಿದ್ದರೆ, ಕೆಲವರೂ ಹೇಗಾದರೂ ಮಾಡಿ ತಮ್ಮ ಕುಟುಂಬ ತಲುಪಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇದಕ್ಕೆ ನಿದರ್ಶನೆ ಎಂಬಂತೆ ಇಲ್ಲೋರ್ವ ಯುವಕ ಬರೋಬ್ಬರಿ 1700 ಕಿ. ಮೀ ಸೈಕಲ್ ಸವಾರಿ ಮಾಡಿ ತನ್ನ ತವರೂರು ತಲುಪಿದ್ದಾನೆ.
20 ವರ್ಷದ ವಲಸೆ ಕಾರ್ಮಿಕ ಮಹೇಶ್ ಜೆನಾ ಮಹಾರಾಷ್ಟ್ರದ ಸಾಂಗ್ಲಿಯಿಂದ ತನ್ನ ಸಂಚಾರ ಆರಂಭಿಸಿ 1700 ಕಿ.ಮೀ ದೂರದ ತನ್ನ ಊರು ತಲುಪಿದ್ದಾನೆ. ಆದರೆ, ಈತನ ಸಂಚಾರ ಅಷ್ಟು ಸುಲಭವಾಗಿರಲಿಲ್ಲ.
ನಾನು ಮಹಾರಾಷ್ಟ್ರದ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದೆ. ತಿಂಗಳಿಗೆ ಸುಮಾರು 8000 ರೂ.ಸಂಬಳ ಸಿಗುತ್ತಿತ್ತು.ಲಾಕ್‌ಡೌನ್ ಹೇರಿದ ಕಾರಣ ನಾನು ನನ್ನ ಸಂಬಳವನ್ನು ಪಡೆಯಲಿಲ್ಲ. ಈ ಹಿನ್ನೆಲೆ ನನಗೆ ಆಹಾರದ ಕೊರತೆಯಾಯಿತು. ಆಗ ನನ್ನೂರಿಗೆ ಹೋಗಲು ನಿರ್ಧರಿಸಿದೆ ಎಂದು ಮಹೇಶ್ ಹೇಳುತ್ತಾನೆ.
ನಾನು ನನ್ನ ಸ್ನೇಹಿತನಿಂದ 3000 ರೂ.ಗಳ ಸಾಲ ಪಡೆದು, ಏಪ್ರಿಲ್ 1 ರಂದು ಸಾಂಗ್ಲಿಯಿಂದ ನನ್ನ ಪ್ರಯಾಣ ಪ್ರಾರಂಭಿಸಿದೆ. ಪ್ರಯಾಣದ ಸಮಯದಲ್ಲಿ ತುಂಬಾ ಆಹಾರದ ಸಮಸ್ಯೆ ಎದುರಿಸಿದೆ. ಇದಲ್ಲದೆ, ನನ್ನ ಬೈಸಿಕಲ್ ಕೂಡ ಹೈದರಬಾದ್ನಲ್ಲಿ ಪಂಕ್ಚರ್ ಆಯಿತು.ಇಂಥಹ ಹಲವಾರು ಸಮಸ್ಯೆಗಳನ್ನು ಎದುರಿಸಿಕೊಂಡು ಅಂತಿಮವಾಗಿ ಏಪ್ರಿಲ್ 7 ರಂದು ಜಾಜ್ಪುರವನ್ನು ತಲುಪಿದೆ ಎಂದು ತನ್ನ ನೋವು ತೋಡಿಕೊಂಡಿದ್ದಾನೆ.
ಜಜ್ಪುರ್ ಗಡಿಯನ್ನು ತಲುಪಿದ ನಂತರ ನಾನು ವೈದ್ಯಕೀಯ ಪರೀಕ್ಷೆಗೆ ಒಳಗಾದೆ ಎಂದ ಮಹೇಶ್, ಪ್ರತಿದಿನ ಸುಮಾರು 14-15 ಗಂಟೆಗಳ ಕಾಲ ಸೈಕ್ಲಿಂಗ್ ಮಾಡಿದ್ದರಿಂದ ಕೇವಲ ಏಳು ದಿನಗಳಲ್ಲಿ ಪ್ರಯಾಣ ಪೂರ್ಣಗೊಳಿಸಲು ಸಹಾಯವಾಯಿತು ಎನ್ನುತ್ತಾನೆ.
ರಾತ್ರಿ ವೇಳೆ ನಾನು ದೇವಸ್ಥಾನಗಳಲ್ಲಿ ಮಲಗುತ್ತಿದ್ದೆ, ಹಲವಾರು ಕಡೆ ಪೊಲೀಸರು ತಡೆದಾಗ, ನಾನು ಮಹಾರಾಷ್ಟ್ರದಿಂದ ಬರುತ್ತಿದ್ದೇನೆ, ಒಡಿಶಾಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದೆ. ಇದನ್ನು ಕೇಳಿಸಿಕೊಂಡ ಪೊಲೀಸರು ನನಗೆ ಮುಂದೆ ಹೋಗಲು ಅನುವು ಮಾಡಿಕೊಡುತ್ತಿದ್ದರು. ಬಹುಶಃ ನಾನು ತಮಾಷೆ ಮಾಡುತ್ತಿದ್ದೇನೆ ಎಂದು ಅವರು ಭಾವಿಸಿದ್ದರು ಎಂದು ತನ್ನ ಪ್ರಯಾಣದ ನೋವನ್ನು ಹಂಚಿಕೊಂಡಿದ್ದಾನೆ.