ನ್ಯೂಯಾರ್ಕ್ (ಅಮೆರಿಕ): ನ್ಯೂಯಾರ್ಕ್ ಕೊರೊನಾ ವೈರಸ್ನ ಪ್ರಮುಖ ಕೇಂದ್ರವಾಗಿ ಮಾರ್ಪಡುತ್ತಿದೆ. ಕೇವಲ 24 ಗಂಟೆಗಳಲ್ಲಿ 630 ಮಂದಿ ಸಾವನ್ನಪ್ಪಿದ್ದು ಮರಣದ ಪ್ರಮಾಣ ತೀವ್ರವಾಗಿದೆ ಎಂದು ನ್ಯೂಯಾರ್ಕ್ ರಾಜ್ಯದ ಗೌವರ್ನರ್ ಆ್ಯಂಡ್ರೂ ಕೌಮೋ ಹೇಳಿದ್ದಾರೆ.
ಏಪ್ರಿಲ್ 2 ಮತ್ತು 3ನೇ ತಾರೀಕಿನ ಮಧ್ಯೆ 562 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿ ಎರಡೂವರೆ ನಿಮಿಷಕ್ಕೆ ಓರ್ವ ಮಹಾಮಾರಿ ಸೋಂಕಿಗೆ ಬಲಿಯಾಗುತ್ತಿದ್ದಾನೆ. ಏಪ್ರಿಲ್ 4ರಂದು ಒಂದೇ ದಿನದಲ್ಲಿ 630 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಅಮೆರಿಕದಲ್ಲಿ 3,12,146 ಮಂದಿ ಸೋಂಕಿತರಿದ್ದು, ನ್ಯೂಯಾರ್ಕ್ ರಾಜ್ಯವೊಂದರಲ್ಲೇ ಸೋಂಕಿತರ ಸಂಖ್ಯೆ 1,13,704ರಷ್ಟಿದೆ. ನ್ಯೂಯಾರ್ಕ್ ನಂತರ ನ್ಯೂಜೆರ್ಸಿ ಕೊರೊನಾದಿಂದ ತೀವ್ರ ಹಾನಿಗೊಳಗಾದ ರಾಜ್ಯವಾಗಿದೆ. ಇಲ್ಲಿ 30 ಸಾವಿರ ಮಂದಿ ಸೋಂಕಿತರಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ನ್ಯೂಯಾರ್ಕ್ ರಾಜ್ಯದಲ್ಲಿ 85 ಸಾವಿರ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಇದರಲ್ಲಿ 22 ಸಾವಿರ ಮಂದಿ ಹೊರ ರಾಜ್ಯಗಳಿಂದ ಕರೆಸಿಕೊಳ್ಳಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳನ್ನು ಕೂಡಾ ಕೊರೊನಾ ವಿರುದ್ಧದ ಸಮರದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗವರ್ನರ್ ತಿಳಿಸಿದ್ದಾರೆ.