ಕೋಲ್ಕತಾ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಮಮತಾ ಬ್ಯಾನರ್ಜಿ ಸರ್ಕಾರವನ್ನು ನಿರಂಕುಶಾಧಿಕಾರಿ, ಸರ್ವಾಧಿಕಾರಿ ಮತ್ತು ಫ್ಯಾಸಿಸ್ಟ್ ಎಂದು ಕರೆದಿದ್ದರು. ಇದಕ್ಕೆ ಪ್ರತ್ಯತ್ತರವಾಗಿ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.
ಮಮತಾ ಬ್ಯಾನರ್ಜಿ ಸರ್ವಾಧಿಕಾರಿ ಆಡಳಿತ ಈ ಸಲ ಕೊನೆ: ತೇಜಸ್ವಿ ಸೂರ್ಯ ವಾಗ್ದಾಳಿ
ನಿಜವಾದ ಫ್ಯಾಸಿಸ್ಟರು ಯಾರೆಂದು ಕಂಡುಹಿಡಿಯಲು ಕನ್ನಡಿ ಕಡೆ ನೋಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ದೇಶವನ್ನು ನಿರಂಕುಶಾಧಿಕಾರ ಮತ್ತು ದ್ವೇಷದ ರಾಜಕೀಯದಿಂದ ನಾಶಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ. ಶ್ರೀ ತೇಜಸ್ವಿ ಸೂರ್ಯ ಅವರು ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುವ ಬದಲು, ನಿಜವಾದ ಫ್ಯಾಸಿಸ್ಟರು ಯಾರೆಂದು ತಿಳಿಯಲು ಇದೀಗ ಕನ್ನಡಿ ನೋಡಲಿ. ಬಿಜೆಪಿಯಲ್ಲಿ ನಿಮ್ಮ ಮೇಲಿನ ಮುಖಂಡರು ಈ ದೇಶವನ್ನು ತಮ್ಮ ನಿರಂಕುಶಾಧಿಕಾರ ಮತ್ತು ದ್ವೇಷದ ರಾಜಕೀಯದಿಂದ 2014 ರಿಂದ ನಾಶಪಡಿಸಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನಿರಂಕುಶಾಧಿಕಾರ, ಸರ್ವಾಧಿಕಾರ ಮತ್ತು ಫ್ಯಾಸಿಸ್ಟ್ ಸರ್ಕಾರ ಈ ಚುನಾವಣೆಯಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದರು. ಪಶ್ಚಿಮ ಬಂಗಾಳದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು, ಪಶ್ಚಿಮ ಬಂಗಾಳದಲ್ಲಿ ಫ್ಯಾಸಿಸಂ ವಿರುದ್ಧ ಧ್ವನಿ ಎತ್ತುವಂತೆ, ಕಾನೂನು ರಕ್ಷಣೆ ಮಾಡುವಂತೆ ಹಾಗೂ ಭಾರತೀಯ ಸಂವಿಧಾನ ಗೌರವಿಸುವಂತೆ ನಾನು ಇಲ್ಲಿನ ಜನರಲ್ಲಿ ಕೇಳುಕೊಳ್ಳುತ್ತೇನೆ ಎಂದಿದ್ದರು.