ಡೆಹ್ರಾಡೂನ್(ಉತ್ತರಾಖಂಡ): ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ), ಸರ್ಜಿಕಲ್ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಅಜಿತ್ ದೋವಲ್ ಬರೋಬ್ಬರಿ ವರ್ಷದ ಬಳಿಕ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದಾರೆ.
ಉತ್ತರಾಖಂಡ್ನ ಪೌರಿ ಜಿಲ್ಲೆಯ ಘೀಡಿ ಗ್ರಾಮಕ್ಕೆ ಭೇಟಿ ನೀಡಿರುವ ಅವರು, ಗ್ರಾಮಸ್ಥರೊಂದಿಗೆ ಕೆಲ ಹೊತ್ತು ಕಾಲ ಸಂವಾದ ನಡೆಸಿದ್ದು, ಇದಾದ ಬಳಿಕ ಆಶ್ರಮದಲ್ಲಿ ಉಳಿದುಕೊಂಡು ಯಜ್ಞದಲ್ಲಿ ಭಾಗಿಯಾದರು. ಸುಮಾರು ಒಂದು ವರ್ಷದ ಬಳಿಕ ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮ ದೇವತೆಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.
ಅಜಿತ್ ದೋವಲ್ ಗ್ರಾಮಕ್ಕೆ ಬಂದಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲು ಪ್ರಾರಂಭಿಸಿದರು. ಆದರೆ ಭದ್ರತಾ ಕಾರಣಗಳಿಂದಾಗಿ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಇದಕ್ಕೂ ಮೊದಲು ದೋವಲ್ ಜ್ವಾಲ್ಫಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗುರುವಾರ ರಾತ್ರಿ ದೋವಲ್ ಹೃಷಿಕೇಶದ ಆಶ್ರಮದಲ್ಲಿ ಉಳಿದು ಗಂಗೆಯಲ್ಲಿ ಸ್ನಾನ ಮಾಡಿ ಯಜ್ಞದಲ್ಲಿ ಭಾಗಿಯಾದರು. ಇಂದು ಸಂಜೆ ಅವರು ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದು, 2004-05ರಲ್ಲಿ ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿಯೂ ದೋವಾಲ್ ಸೇವೆ ಸಲ್ಲಿಸಿದ್ದಾರೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದೋವಾಲ್ ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಸದಸ್ಯರಾಗಿದ್ದಾರೆ. ಈ ಹಿಂದೆ ಪಾಕಿಸ್ತಾನದಲ್ಲಿ ಗೂಢಾಚಾರರಾಗಿದ್ದು, ಪ್ರಧಾನಿ ಮೋದಿಯವರ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದಾರೆ.