ನಾಗ್ಪುರ (ಮಹಾರಾಷ್ಟ್ರ): ದೇಶದ ಜನರ ಜಾತಿ ಮತ್ತು ಸಿದ್ಧಾಂತದ ಬಗ್ಗೆ ಮಾಹಿತಿ ಕಲೆಹಾಕುವ ಉದ್ದೇಶದಿಂದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಾಡಲು ಕೇಂದ್ರ ಮುಂದಾಗಿದೆ ಎಂದು ವಂಚಿತ ಬಹುಜನ ಅಗಾದಿ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಆರೋಪ ಮಾಡಿದ್ದಾರೆ.
ಪ್ರತಿ ಕುಟುಂಬದ ಜಾತಿ ಮತ್ತು ಅವರ ಸಿದ್ಧಾಂತದ ಮಾಹಿತಿಯನ್ನು ಪಡೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ. ಇದು ನರೇಂದ್ರ ಮೋದಿ ಸರ್ಕಾರದ ಕೆಟ್ಟ ಯೋಜನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ನವೀಕರಿಸಲು ಡಿಸೆಂಬರ್ 24 ರಂದು 3,941.35 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸರ್ಕಾರದ ಪ್ರಕಾರ, ಎನ್‌ಪಿಆರ್ ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿಯಾಗಿದೆ. ಸಾಮಾನ್ಯ ನಿವಾಸಿ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲು ಕಳೆದ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸ್ಥಳೀಯ ಪ್ರದೇಶದಲ್ಲಿ ನೆಲಸಿರಬೇಕು.
1955ರ ಪೌರತ್ವ ಕಾಯ್ದೆ ಹಾಗೂ ಪೌರತ್ವ ನಿಯಮಗಳು 2003 ರ ಅನುಸಾರ 2010 ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಅನ್ನು ಸಿದ್ಧಪಡಿಸಲಾಗಿತ್ತು. ನಂತರ ಅದನ್ನು 2015 ರಲ್ಲಿ ಆಧಾರ್ ವ್ಯವಸ್ಥೆಯ ಮುಖಾಂತರ ನವೀಕರಿಸಲಾಗಿತ್ತು.
ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಪ್ರಕಾರ, ಅಸ್ಸೋಂ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020 ರ ಏಪ್ರಿಲ್ನಿಂದ 2021ರ ಸೆಪ್ಟೆಂಬರ್ ವರೆಗೆ ಈ ಎನ್‌ಪಿಆರ್ ಮಾಡಲು ನಿರ್ಧರಿಸಲಾಗಿದೆ.