ನವದೆಹಲಿ: ಕೋವಿಡ್-19 ಕಾಯಿಲೆಗೆ ಕಾರಣವಾಗುವ SARS-CoV-2 ವೈರಸ್ ಮಾನವರ ಚರ್ಮದ ಮೇಲೆ 9 ಗಂಟೆಗಳ ಕಾಲ ಜೀವಂತವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಸಾಮಾನ್ಯ ವೈರಲ್ ಜ್ವರಕ್ಕೆ ಕಾರಣವಾಗುವ ಇನ್ಫ್ಲುಯೆಂಜಾ ವೈರಸ್ (IAV) ಮನುಷ್ಯರ ಚರ್ಮದ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಇರುತ್ತವೆ. ಆದರೆ ಕೊರೊನಾ ವೈರಸ್ ಜನರ ಗಮನಕ್ಕೆ ಬಾರದೆ ಫ್ಲೂ ವೈರಸ್‌ಗಳಿಗಿಂತ ಹೆಚ್ಚು ಕಾಲ ಉಳಿಯುವ ವೈರಸ್ ಆಗಿದೆ ಎಂದು ಜಪಾನ್‌ನ ಕ್ಯೋಟೋ ಪ್ರಿಫೆಕ್ಚರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ಹೇಳಿದ್ದಾರೆ.
SARS-CoV-2 ಮತ್ತು IAV ವೈರಸ್ಗಳು ಗಾಜು, ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳ ಮೇಲ್ಮೈಗಳಿಗಿಂತ ಚರ್ಮದ ಮೇಲೆಯೇ ಸಕ್ರಿಯವಾಗಿರುತ್ತದೆ. ಇದರಿಂದಾಗಿ ಬಹಳ ಸುಲಭ, ವೇಗವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಲು ಕಾರಣವಾಗುತ್ತಿದೆ ಎಂದು ಅಧ್ಯಯನ ತಿಳಿಸಿದೆ.
ಈ ಎರಡೂ ವೈರಸ್ಗಳನ್ನು ಸ್ಯಾನಿಟೈಸರ್ಗಳಿಂದ ನಾಶ ಮಾಡಬಹುದಾಗಿದೆ. ಹೀಗಾಗಿ ಕೋವಿಡ್-19 ಹರಡುವಿಕೆ ತಡೆಗಟ್ಟುವಲ್ಲಿ ಕೈ ತೊಳೆಯುವ ಹಾಗೂ ಸ್ಯಾನಿಟೈಸರ್ ಬಳಕೆಯ ಪಾತ್ರ ಮಹತ್ವದ್ದಾಗಿದೆ ಎಂದು ಈ ಸಂಶೋಧನೆ ಒತ್ತಿ ಹೇಳುತ್ತಿದೆ.