ಮುಂಬೈ: ಇಬ್ಬರ ಮಧ್ಯೆ ಚರ್ಮದಿಂದ ಚರ್ಮ ಸ್ಪರ್ಶವಿಲ್ಲದಿದ್ರೆ ಅದು ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೇವಲ ದೇಹವನ್ನು ಸವರುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಲೈಂಗಿಕ ಉದ್ದೇಶವನ್ನಿಟ್ಟುಕೊಂಡು ನೇರವಾಗಿ ದೇಹಸಂಪರ್ಕ ಮಾಡುವುದರಿಂದ ಲೈಂಗಿಕ ದೌರ್ಜನ್ಯ ಎಂದು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ನ ನಾಗ್ಪುರ ಪೀಠ ತೀರ್ಪು ನೀಡಿದೆ.
ಒಬ್ಬ ಅಪ್ರಾಪ್ತೆ ಬಟ್ಟೆ ಧರಿಸಿಕೊಂಡಿದ್ದಾಗ ಆಕೆಯ ಎದೆಯನ್ನು ಯಾರಾದರೂ ಮುಟ್ಟಿದರೆ ಅಥವಾ ಅವರ ಕೈ ಎದೆಗೆ ತಾಗಿದ ತಕ್ಷಣ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆತ ಅಪ್ರಾಪ್ತೆ ಧರಿಸಿದ್ದ ಬಟ್ಟೆಯನ್ನು ತೆಗೆದು ಸ್ಪರ್ಶಿಸಿದರೆ ಅಥವಾ ಬಟ್ಟೆಯೊಳಗಿಂದ ಕೈ ಹಾಕಿದರೆ ಅದನ್ನು ಲೈಂಗಿಕ ದೌರ್ಜನ್ಯ ಎನ್ನಬಹುದು. ಇಂತಹ ಪ್ರಕರಣವನ್ನು ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಿಸಬಹುದು ಎಂದು ಅಪ್ರಾಪ್ತೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರೋಪಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾ ಹೇಳಿದರು.
ಅಪ್ರಾಪ್ತೆ ಜತೆ ಬಲವಂತವಾಗಿ ಸಂಭೋಗ ನಡೆಸುವುದು, ಆಕೆಯ ಖಾಸಗಿ ಅಂಗಗಳನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವುದು ಮತ್ತು ಅಪ್ರಾಪ್ತೆಯಿಂದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿಕೊಳ್ಳುವುದು ಪೋಕ್ಸೋ ಕಾಯ್ದೆಯಡಿ ಅಪರಾಧ ಎನಿಸಿಕೊಳ್ಳುತ್ತದೆ ಎಂದು ಪೀಠ ಹೇಳಿದೆ
ಪ್ರಸ್ತುತ ಪ್ರಕರಣ ಹೀಗಿಲ್ಲ. ಇಲ್ಲಿ ಆರೋಪಿಯು 12 ವರ್ಷದ ಬಾಲಕಿಯ ಸ್ತನವನ್ನು ಸ್ಪರ್ಶಿಸುವಾಗ ಆಕೆಯ ಬಟ್ಟೆಯನ್ನು ತೆಗೆಯಲಿಲ್ಲ. ನೇರವಾಗಿ ದೈಹಿಕ ಸಂಪರ್ಕ ಹೊಂದಲಿಲ್ಲ. ಹಾಗಾಗಿ ಈ ಪ್ರಕರಣ ಪೋಕ್ಸೋ ಕಾಯ್ದೆಯಡಿ ಬರುವುದಿಲ್ಲ. ಈ ಪ್ರಕರಣಕ್ಕೆ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಕುಂದು ತರುವುದು) ಅನ್ವಯ ಆಗುತ್ತದೆ ಎಂದು ನ್ಯಾಯಾಧೀಶೆ ಪುಷ್ಪಾ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 39 ವರ್ಷದ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಗಣದೇವಾಲಾ ಬದಲಾಯಿಸಿದ್ದಾರೆ.
ಸೆಕ್ಷನ್ ನ್ಯಾಯಾಲಯವು ಪೋಕ್ಸೊ ಕಾಯ್ದೆಯಡಿ ಮತ್ತು ಐಪಿಸಿ ಸೆಕ್ಷನ್ 354 ರ ಅಡಿ ಮಾಡಿದ ಅಪರಾಧಗಳಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಗಳು ಏಕಕಾಲದಲ್ಲಿ ನಡೆಯಬೇಕಿತ್ತು. ಹೈಕೋರ್ಟ್ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ತನ್ನ ಶಿಕ್ಷೆ ಎತ್ತಿಹಿಡಿದಿದ್ದರಿಂದ ಪೋಕ್ಸೊ ಕಾಯ್ದೆ ಪ್ರಕರಣ ಖುಲಾಸೆಗೊಳಿಸಿ ಹೈಕೋರ್ಟ್ ತೀರ್ಪು ಬದಲಿಸಿದೆ.
2016ರ ಡಿಸೆಂಬರ್‌ನಲ್ಲಿ ಆರೋಪಿತ ವ್ಯಕ್ತಿ 12 ವರ್ಷದ ಬಾಲಕಿಯನ್ನು ಪೇರಲೆ ಹಣ್ಣಿನ ಆಮಿಷ ತೋರಿಸಿ ಈತ ಮನೆಗೆ ಕರೆದಿದ್ದ. ಕೆಲವು ಸಮಯದ ಬಳಿಕ ಆಕೆಯ ತಾಯಿ ಹುಡುಕುತ್ತ ಹೋದಾಗ ಆಕೆ ಅಳುತ್ತ ಕುಳಿತಿದ್ದಳು. ಏನಾಯಿತು ಎಂದು ಕೇಳಿದಾಗ ಆಕೆ ಎಲ್ಲವನ್ನೂ ವಿವರಿಸಿದ್ದಳು. ನಂತರ ತಾಯಿ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ದೂರು ನೀಡಿದ್ದರು. ನಂತರ ಆರೋಪಿ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಪ್ರಕರಣ ಬಾಂಬೇ ಹೈ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತಂತೆ ನಾಗ್ಪುರ್ ಪೀಠ ಮಹತ್ವದ ತೀರ್ಪು ನೀಡಿದೆ.