ಬೆಂಗಳೂರು: ಇಸ್ರೋ ವಿಜ್ಞಾನಿಗಳ ಕಣ್ಣು ತಪ್ಪಿಸಿ ಕೊನೆ ಗಳಿಗೆಯಲ್ಲಿ ಕೈಕೊಟ್ಟಿದ್ದ ವಿಕ್ರಂ ಲ್ಯಾಂಡರ್ ಪತ್ತೆ ಹಚ್ಚುವಲ್ಲಿ ಆರ್ಬಿಟರ್ ಯಶಸ್ವಿಯಾಗಿತ್ತು. ಇದೀಗ ವಿಕ್ರಂನನ್ನು ಪತ್ತೆ ಹಚ್ಚಿ ಇರುವಿಕೆಯನ್ನ ಖಚಿತ ಪಡಿಸಿಕೊಂಡಿದೆ ಇಸ್ರೋ. ಅಂದಹಾಗೆ ಸಾಫ್ಟ್ ಲ್ಯಾಂಡಿಂಗ್ ಬದಲು ವಿಕ್ರಂ ಹಾರ್ಡ್ ಲ್ಯಾಂಡಿಂಗ್ ಆಗಿದ್ದಾನೆ. ಕೇವಲ 2.1 ಕಿಮೀ ಹತ್ತಿರ ಬಂದು ಇಸ್ರೋ ಸಂಪರ್ಕದಿಂದ ಕಣ್ಮರೆ ಆಗಿದ್ದ ವಿಕ್ರಂ ಓರೆಯಾಗಿ ಶಶಿಯ ಅಂಗಳವನ್ನ ತಲುಪಿದೆ.
ಸಾಫ್ಟ್ ಲ್ಯಾಂಡಿಂಗ್ ಆಗಿ ವಿಕ್ರಮ ಮೆರೆಯುವ ವಿಜ್ಞಾನಿಗಳ ಆಸೆಯನ್ನ ತುಸು ನಿರಾಸೆಗೊಳಿಸಿದ್ದ ವಿಕ್ರಂ ಈಗ, ಶಶಿ ಅಂಗಳದಲ್ಲಿ ಓರೆಯಾಗಿ ಲ್ಯಾಂಡಿಂಗ್ ಆಗಿರುವುದು ಇಸ್ರೋ ವಿಜ್ಞಾನಿಗಳ ಆಸೆಯನ್ನ ಮತ್ತಷ್ಟು ಜೀವಂತವಾಗಿರಿಸಿದ್ದು, ವಿಕ್ರಂನ ಅಂತರಾಳದಲ್ಲಿರುವ ರೋವರ್ ಅನ್ನು ಕೆಳಗಿಳಿಸಿ ಕಾರ್ಯಾಚರಣೆ ಮಾಡಲು ಇನ್ನಿಲ್ಲದ ಶ್ರಮ ಹಾಕುವಂತೆ ಮಾಡಿದೆ.
ಈ ಸಂಬಂಧ ಸೋಮವಾರ ಹೇಳಿಕೆ ನೀಡಿರುವ ಇಸ್ರೋ ಅಧಿಕಾರಿಗಳು, ಯೋಜನೆ ಹಾಕಿಕೊಂಡಂತೆ ಅದೇ ಜಾಗದಲ್ಲಿ ವಿಕ್ರಂ ಹಾರ್ಡ್ ಲ್ಯಾಂಡಿಂಗ್ ಆಗಿದ್ದಾನೆ. ಆರ್ಬಿಟರ್ನ ಬೋರ್ಡ್ ಕ್ಯಾಮೆರಾ ಈ ಇಮೇಜ್ ಅನ್ನು ಇಸ್ರೋಗೆ ಕಳುಹಿಸಿದ್ದು, ವಿಕ್ರಂ ಒರೆಯಾಗಿ ಹಾರ್ಡ್ ಲ್ಯಾಂಡಿಂಗ್ ಆಗಿದ್ದು, ತುಂಡು ತುಂಡಾಗಿ ಬಿದ್ದಿಲ್ಲ. ಬದಲಿಗೆ ಓರೆಯಾಗಿ ನಿಗದಿತ ಸ್ಥಳದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿದೆ. ಇನ್ನು ರೋವರ್ ಪ್ರಗ್ಯಾನ್ ವಿಕ್ರಮನ ಅಂತರಾಳದಲ್ಲೇ ಇದ್ದಾನೆ ಎಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್ನಿಂದ ಸಂವಹನಕ್ಕೆ ತೀವ್ರ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ ತಂತ್ರಜ್ಞರು.
14 ದಿನ ಲ್ಯಾಂಡರ್ - ರೋವರ್ ಜೀವನ
ವಿಶೇಷ ಎಂದರೆ ವಿಕ್ರಂ ಮತ್ತು ಪ್ರಜ್ಞಾನ ಆಯುಷ್ಯ ಕೇವಲ ಒಂದು ಲೂನಾರ್ ಡೇ, ಅಂದರೆ ಕೇವಲ 14 ದಿನಗಳು ಮಾತ್ರ. ಅಷ್ಟರೊಳಗೆ ಅವುಗಳ ಜತೆ ಇಸ್ರೋ ಸಂಪರ್ಕ ಸಾಧಿಸಬೇಕಾಗಿದೆ. ವಿಕ್ರಂನೊಂದಿಗೆ ಸಂಪರ್ಕ ಭಾರಿ ಕಷ್ಟ. ಅವಕಾಶಗಳು ಭಾರಿ ಕಡಿಮೆ. ಒಂದೊಮ್ಮೆ ಅದು ಸಾಫ್ಟ್ ಲ್ಯಾಂಡಿಂಗ್ ಆಗಿದ್ದರೆ ಮಾತ್ರ ಸಂಪರ್ಕ ಈಜಿ ಆಗಿರುತ್ತಿತ್ತು. ಕೊನೆ ಕ್ಷಣದ ಆಶಾಭಾವ ಹೊರೆತುಪಡಿಸಿ ಇನ್ನುಳಿದಿದ್ದನ್ನು ಏನೂ ಹೇಳಲು ಆಗಲ್ಲ ಅಂತಾರೆ ವಿಜ್ಞಾನಿಗಳು.
ಆಸೆ ಇನ್ನೂ ಜೀವಂತ;
ಆದರೆ ಇಸ್ರೋ ಇನ್ನೊಂದು ಮೂಲಗಳ ಪ್ರಕಾರ.. ವಿಕ್ರಂನೊಂದಿಗೆ ಸಂಪರ್ಕ ಸಾಧಿಸಲು ಲಿಂಕ್ಗಳನ್ನ ಮರುಸ್ಥಾಪನೆಗೆ ಉತ್ತಮ ಅವಕಾಶವಿದೆ. ಲ್ಯಾಂಡರ್ಗೆ ಮರು ಜೀವ ಬರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಆಗಲ್ಲ. ಆದರೆ ಅದಕ್ಕೆ ಕೆಲವು ಇತಿ ಮಿತಿಗಳಿವೆ. ಕೆಲ ಸಂಪರ್ಕ ಕಳೆದುಕೊಂಡು ಬಾಹ್ಯಾಕಾಶ ನೌಕೆಗಳನ್ನ ಮರು ಸ್ಥಾಪಿಸಿದ ಅನುಭವ ನಮಗಿದೆ. ಆದರೆ, ವಿಕ್ರಂನಿಗೆ ಅಂತಹ ಅವಕಾಶಗಳು ತೀರಾ ಕಡಿಮೆ. ಯಾಕೆಂದರೆ ವಿಕ್ರಂ ಈಗಾಗಲೇ ಶಶಿಯ ದಕ್ಷಿಣದ ಅಂಗಳದಲ್ಲಿ ಓರೆಯಾಗಿ ನೆಲ ಸ್ಪರ್ಶಿಸಿಯಾಗಿದೆ. ಈ ಸಂದರ್ಭದಲ್ಲಿ ಅದು ತೀರಾ ಕಠಿಣವಾದರೂ ಅಸಾಧ್ಯವೇನೂ ಅಲ್ಲ. ಇಂತಹ ಅವಕಾಶಗಳು ನಮಗಿವೆ ಅಂತಾರೆ ಕೆಲ ವಿಜ್ಞಾನಿಗಳು.
ಲ್ಯಾಂಡರ್ ಜನರೇಟಿಂಗ್ ಪವರ್ ದೊಡ್ಡ ವಿಷಯ ಅಲ್ಲ ಎನ್ನುವ ಇಸ್ರೋ ಕೆಲ ವಿಜ್ಞಾನಿಗಳು, ಲ್ಯಾಂಡರ್ ಸುತ್ತ ಸೋಲಾರ್ ಪ್ಯಾನೆಲ್ಗಳಿದ್ದು, ಇಂಟರ್ನಲ್ ಬ್ಯಾಟರಿ ಸಹಾಯ ಸಹ ಇದೆ ಅಂತಿದ್ದಾರೆ. ಏನೇ ಇರಲಿ ವಿಕ್ರಂ ಇಸ್ರೋ ಹಿಡಿತಕ್ಕೆ ಸಿಲುಕಿ, ನಮ್ಮ ವಿಜ್ಞಾನಿಗಳ ಶ್ರಮ ವ್ಯರ್ಥವಾಗದಿದ್ದರೆ ಸಾಕು.