ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ನಟ ಹಾಗೂ ಮಕ್ಕಳ್ ನೀದಿ ಮೈಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್ ಹಾಸನ್, " ಎಲ್ಲಾ ಅಭ್ಯರ್ಥಿಗಳು ನನ್ನ ಮುಖವಿದ್ದಂತೆ, ನಾನು ಹೆಮ್ಮೆಯ ಸಾರಥಿ, ರಥವಾಗುವುದಕ್ಕಿಂತ ಸಾರಥಿಯಾಗಿರಲು ನನಗೆ ಖುಷಿಯಿದೆ" ಎಂದಿದ್ದಾರೆ.
ಪುದುಚೇರಿ ಹಾಗೂ ತಮಿಳುನಾಡಿನ 21 ಕ್ಷೇತ್ರಗಳಲ್ಲಿನ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಕಮಲ್ ಹಾಸನ್ ಕಳೆದ ವಾರ ಬಿಡುಗಡೆ ಮಾಡಿದ್ದರು. ಪಟ್ಟಿ ಬಿಡುಗಡೆ ವೇಳೆ ತಮ್ಮ ಪಕ್ಷ ತೀರ್ಮಾನಿಸಿದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು.
ಉದ್ಯೋಗ, ಸಮಾನ ವೇತನ ಶ್ರೇಣಿ ಹಾಗೂ ಮೀಸಲಾತಿಯನ್ನೇ ಕಮಲ್ ತಮ್ಮ ಪ್ರಚಾರದ ಅಜೆಂಡಾವನ್ನಾಗಿ ಮಾಡಿಕೊಂಡಿದ್ದಾರೆ. 50 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಿದ್ದೇವೆ ಎಂದು ಆಶ್ವಾಸನೆ ನೀಡಿದ್ದಾರೆ.