ಈ ಹಿಂದೆ ಜುಲೈ 15 ರಂದು ನಡೆದ ಸಭೆಯ ವಿಡಿಯೋ ತುಣುಕಿನಲ್ಲಿ ಧರ್ಮೇಂದ್ರ ಅವರು ‘ಅಂತಾರಾಷ್ಟ್ರೀಯ ನಿರ್ಬಂಧಗಳ ಮಧ್ಯೆಯೂ ಸ್ಥಳೀಯ ಇರಾನಿ ಕರೆನ್ಸಿ ಮೂಲಕ ಆ ದೇಶದ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುತ್ತಿರುವ ಏಕೈಕ ರಾಷ್ಟ್ರ ಭಾರತ‘ ಎಂದು ಹೇಳಿದ್ದರು. ಪ್ರಸ್ತುತ, ಭಾರತವು ಹೆಚ್ಚಾಗಿ ಕೃಷಿ ಉತ್ಪನ್ನಗಳಾದ ಚಹಾ, ಅಕ್ಕಿ ಹಾಗೂ ಕಾರುಗಳ ಕೆಲ ಬಿಡಿಭಾಗಗಳನ್ನು ರಪ್ತು ಮಾಡುತ್ತಿದೆ. ಆದರೆ, ಅಮೆರಿಕ ಒತ್ತಡ ಹೇರುತ್ತಿರುವ ಹಿನ್ನೆಲೆ ತೈಲ ಆಮದು ಪ್ರಮಾಣವನ್ನು ಶೂನ್ಯ ಎನಿಸುವ ಮಟ್ಟಿಗೆ ತಗ್ಗಿಸಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇರಾನ್ ( ಸಿಬಿಐ) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ), ಯುಕೋ ಬ್ಯಾಂಕ್ ಜೊತೆಗೆ ಇರಾನ್ ದೇಶಕ್ಕೆ ಸೇರಿದ ಆರು ಬ್ಯಾಂಕುಗಳು ಸರಕುಗಳ ವಿನಿಮಯಕ್ಕಾಗಿ ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸುತ್ತಿವೆ. ಮುಖ್ಯವಾಗಿ ‘ಚಬಹಾರ್ಗೆ ಸಂಬಂಧಿಸಿದಂತೆ ಏನು ಮಾಡಬೇಕು ಎಂಬುದನ್ನು ಅಮೆರಿಕ ಭಾರತಕ್ಕೆ ಹೇಳಲು ಸಾಧ್ಯ ಇಲ್ಲ’ ಎಂದು ಧರ್ಮೇಂದ್ರ ಹೇಳಿದ್ದರು.
"ಒತ್ತಡದ ಸಂದರ್ಭದಲ್ಲಿ, ನಾನು ಕೆಲ ಮಾತುಗಳ್ನನಾಡಿರುವುದು ನಿಜ. ನಮ್ಮ ದೇಶ ಮಾತ್ರ ಇರಾನಿಗೆ ಹಣಕಾಸು ಒದಗಿಸುವ ದ್ವಿಪಕ್ಷೀಯ ರೂಪಾಯಿ-ರಿಯಾಲ್ ವ್ಯಾಪಾರ ವ್ಯವಸ್ಥೆಯನ್ನು ಮುಂದುವರಿಸಿದೆ. ವಾಸ್ತವವೆಂದರೆ ನಾವು ಚಬಹಾರ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ, ಚಬಹಾರ್‌ಗಾಗಿ ಉಪಕರಣಗಳನ್ನು ಖರೀದಿಸಿ, ಚಬಹಾರ್‌ಗಾಗಿಯೇ ಉತ್ಪನ್ನಗಳನ್ನು ತಯಾರಿಸಿಕೊಡುತ್ತಿದ್ದೇವೆ.‘ ಚಬಹಾರ್‌ನಲ್ಲಿ ನಾವು ಏನು ಮಾಡಬೇಕು ಎಂಬುದನ್ನು ಅಮೆರಿಕ ಹೇಳಲು ಸಾಧ್ಯ ಇಲ್ಲ‘ ಎಂದು ಆ ದೇಶಕ್ಕೆ ತಿಳಿಸಿರುವುದಾಗಿ ರಾಯಭಾರಿ ಹೇಳಿದ್ದಾರೆ.
‘ತೆಹ್ರಾನ್ ಟೈಮ್ಸ್ ‘ ಈ ಮೊದಲು ಟ್ವೀಟ್ ಮಾಡಿ ಅಳಿಸಿ ಹಾಕಿರುವ ವಿಡಿಯೋದಲ್ಲಿ ಕೂಡ ಗದ್ದಮ್ ಇದೇ ರೀತಿಯ ಮಾತುಗಳನ್ನಾಡಿದ್ದಾರೆ. ವಾರ್ಷಿಕ ಒಡಂಬಡಿಕೆ ಅಥವಾ ಮಧ್ಯಂತರ ಗುತ್ತಿಗೆ ಆಧಾರದಲ್ಲಿ ಎರಡೂ ದೇಶಗಳ ನಡುವೆ 2018ರ ಡಿಸೆಂಬರ್‌ನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಬಹಾರ್ ಮೂಲಕ ಸರಕು ಸಾಗಾಟದ ಪ್ರಮಾಣ ಗಣನೀಯ ಹೆಚ್ಚಳ ಕಂಡಿದೆ.
“2018ರ ಮತ್ತು 2019ರ ಡಿಸೆಂಬರ್ ನಡುವೆ ನಡುವಿನ ಒಂದು ವರ್ಷದಲ್ಲಿ ನಾವು ಸರಕು ಸಾಗಾಟದ ಪ್ರಮಾಣವನ್ನು 6000 ಟನ್ ಕಂಟೇನರ್‌ಗಳಿಗೆ ಹೆಚ್ಚಳ ಮಾಡಿದ್ದೇವೆ. ಒಂದು ದಶಲಕ್ಷ ಟನ್‌ಗಿಂತಲೂ ಅಧಿಕ ಬೃಹತ್ ಸರಕು, ಅಕ್ಕಿ, ಸಕ್ಕರೆ, ಗೋಧಿಯನ್ನು ಇರಾನ್ ಮತ್ತು ಆಫ್ಘಾನಿಸ್ತಾನಕ್ಕೆ ಪೂರೈಕೆ ಮಾಡಲಾಗಿದೆ. ಒಂದು ವರ್ಷದೊಳಗೆ ಸರಕು ಸಾಗಾಟ ಭಾರಿ ಅಭಿವೃದ್ಧಿ ಹೊಂದಿದೆ. ಆದರೆ, ಇದು ಹೊಸ ಬಂದರು. ಅಭಿವೃದ್ಧಿ ಹೊಂದಲು ಇದು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
ಚೀನಾ ಜೊತೆಗೆ ಇರಾನ್ 25 ವರ್ಷಗಳ ಸಮಗ್ರ ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ಒದಗಿ ಬಂದಿರುವಾಗಲೇ ಇರಾನಿನ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯಾದ ‘‘ತೆಹ್ರಾನ್ ಟೈಮ್ಸ್ ‘’ ಜೊತೆಗೆ ಭಾರತೀಯ ರಾಯಭಾರಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ರಾಯಭಾರಿ ಗದ್ದಮ್ ಅವರು ಮತ್ತೊಂದು ಅಂಶವನ್ನು ಕೂಡ ಉಲ್ಲೇಖಿಸಿದ್ದಾರೆ. ಈ ವರ್ಷದ ಅಕ್ಟೋಬರ್ ವೇಳೆಗೆ ಚಬಹಾರ್ ಬಂದರಿಗೆ ಸಂಬಂಧಿಸಿದ ಸಾಧನ-ಸಲಕರಣೆಗಳನ್ನು ಮುಖ್ಯ ಪೂರೈಕೆದಾರ ದೇಶಗಳಾದ ಇಟಲಿ, ಫಿನ್ಲೆಂಡ್, ಜರ್ಮನಿ ಹಾಗೂ ಚೀನಾಗಳಿಂದ ತರಿಸಲಾಗುವುದು ಎಂದಿದ್ದಾರೆ. ಕಾಕತಾಳೀಯ ಎಂಬಂತೆ ಭಾರತ ತಿದ್ದುಪಡಿಯೊಂದಕ್ಕೆ ಮುಂದಾಗಿದೆ. ದೇಶದ ಭದ್ರತೆಗೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಧಕ್ಕೆ ಒದಗುತ್ತದೆ ಎಂಬ ನೆಲೆಯಲ್ಲಿ ತನ್ನೊಂದಿಗೆ ಗಡಿ ಹಂಚಿಕೊಂಡ ದೇಶಗಳು ಹರಾಜುದಾರರಾಗಿ ಭಾಗವಹಿಸುವುದನ್ನು ನಿರ್ಬಂಧಿಸಲು, 2017ರ ಸಾಮಾನ್ಯ ಹಣಕಾಸು ನಿಯಮಗಳಿಗೆ ತಿದ್ದುಪಡಿ ತರಲು ಅದು ಹೊರಟಿದೆ. ಚೀನಾದ ವ್ಯವಹಾರಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿರುವುದು ಈ ಬೆಳವಣಿಗೆಯಿಂದ ಅರ್ಥವಾಗುತ್ತದೆ.
ಇದಕ್ಕೂ ಮೊದಲು ಜುಲೈ 20ರಂದು ಇರಾನಿನ ಕಿರಿಯ ಸಚಿವರನ್ನು ಭಾರತೀಯ ರಾಯಭಾರಿ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ‘ವಿವಾದಾತ್ಮಕ ವರದಿಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇರುವುದಕ್ಕೆ ಇರಾನ್ ಅಸಮಾಧಾನ ವ್ಯಕ್ತಪಡಿಸಿತ್ತು’ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ. ರಾಯಭಾರಿ ಗದ್ದಮ್ ಧರ್ಮೇಂದ್ರ ಅವರು ಇರಾನಿನ ರಸ್ತೆ ಸಚಿವ ಮತ್ತು ರೈಲ್ವೆ ಮುಖ್ಯಸ್ಥ ಸಯೀದ್ ರಸೌಲಿ ಅವರೊಂದಿಗೆ ಚಬಹಾರ್-ಝೇದಾನ್ ರೈಲ್ವೆ ಸಂಪರ್ಕ ಯೋಜನೆಗೆ ಸಂಬಂಧಿಸಿದಂತೆ ನಡೆದ ಬೆಳವಣಿಗೆಗಳ ಕುರಿತು ವಿಚಾರಗಳನ್ನು ಹಂಚಿಕೊಂಡಿದ್ದರು. ರಸೌಲಿ ಅವರು ‘ಚಬಹಾರ್-ಜಹೇದಾನ್ ರೈಲ್ವೆ ಯೋಜನೆಯಿಂದ ಭಾರತ ಇರಾನನ್ನು ಹೊರಗಿಟ್ಟಿದೆ ಎಂಬ ವರದಿಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿದೆ’ ಎಂದು ಆರೋಪಿಸಿರುವುದಾಗಿ ಭಾರತೀಯ ದೂತಾವಾಸದ ಅಧಿಕೃತ ಟ್ವಿಟರ್ ಖಾತೆ ತಿಳಿಸಿದೆ.
ಮಧ್ಯ ಏಷ್ಯಾದ ಹೆಬ್ಬಾಗಿಲು ಎನಿಸಿದ ಆಗ್ನೇಯ ಇರಾನ್‌ನಲ್ಲಿ ಚಬಹಾರ್ ಬಂದರು ಅಭಿವೃದ್ಧಿ ಯೋಜನೆಯನ್ನು ಭಾರತ ಕೈಗೆತ್ತಿಕೊಂಡಿದೆ. ಅಲ್ಲದೆ ಪಾಕಿಸ್ತಾನದ ಕಾರಣಕ್ಕೆ ಭಾರತದೊಂದಿಗೆ ಭೂ ವ್ಯಾಪಾರ ಕಡಿತಗೊಂಡಿರುವ ಹಿನ್ನೆಲೆ ಆಫ್ಘಾನಿಸ್ತಾನಕ್ಕೆ ಭಾರತ ಈ ಬಂದರಿನಿಂದಲೇ ಮಾನವೀಯ ನೆಲೆಯಲ್ಲಿ ನೆರವು ಕಲ್ಪಿಸುತ್ತಿದೆ. ಯೋಜನೆಯ ಮೊದಲ ಹಂತವಾಗಿ ಚಬಹಾರ್‌ನಲ್ಲಿ ಶಾಹಿದ್ ಬೆಹೆಶ್ತಿ ಬಂದರನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ.
ಮೂಲತಃ ಚಬಹಾರ್ ಹೊಸ ಬಂದರಾಗಿ ಕಾರ್ಯನಿರ್ವಹಿಸುತ್ತಿದೆ. ಅದು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಯೋಜನೆ ಮುಂದುವರಿದಂತೆ ಸರಕು ಸಾಗಣೆ ಪ್ರಮಾಣ ಹೆಚ್ಚುತ್ತದೆ ಎಂದು ನಾವು ಭಾವಿಸುತ್ತೇವೆ. ಅಜರ್ಬೈಜಾನ್ ಮೂಲಕ ಆಫ್ಘಾನಿಸ್ತಾನ, ಮಧ್ಯ ಏಷ್ಯಾಕ್ಕೆ ಹೆಚ್ಚಿನ ಸರಕು ಸಾಗಣೆ ವ್ಯವಸ್ಥೆ ಕಲ್ಪಿಸಲು ಇದರಿಂದ ಸಾಧ್ಯವಾಗುತ್ತದೆ. ಪ್ರಸ್ತುತ ಅಬ್ಬಾಸ್ ಬಂದರು ಇರಾನ್ ಪಾಲಿನ ಮುಖ್ಯ ಬಂದರಾಗಿ ಕೆಲಸ ಮಾಡುತ್ತಿದೆ. ಇಲ್ಲಿಂದಲೇ ಇರಾನಿನ ಶೇ.90ರಷ್ಟು ಪಾಲು ಬಂದರುಗಳ ನಿರ್ವಹಣೆ ಮಾಡಲಾಗುತ್ತಿದೆ. ನಾವು ಒಂದು ವರ್ಷದಲ್ಲಿ ಚಬಹಾರಿನ ಶೇ.3ರಷ್ಟು ಪಾಲು ಪಡೆದಿದ್ದೇವೆ. ಚಬಹಾರ್ ನಾವು ಅಭಿವೃದ್ಧಿಪಡಿಸಬೇಕು. ಇದಕ್ಕೆ ಸಮಯ ಹಿಡಿಯಲಿದೆ” ಎಂದು ತೆಹ್ರಾನ್ ಟೈಮ್ಸ್ ಹಿರಿಯ ಪತ್ರಕರ್ತರಿಗೆ ಭಾರತೀಯ ರಾಯಭಾರಿ ತಿಳಿಸಿದ್ದಾರೆ.
ಸ್ಮಿತಾ ಶರ್ಮಾ, ನವದೆಹಲಿ