ನವದೆಹಲಿ: ಆರೋಗ್ಯ ಕಾರ್ಯಕರ್ತರಿಗೆ ರಕ್ಷಣೆ ನೀಡುವ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಈ ಮಸೂದೆಯನ್ನು ರಾಜ್ಯಸಭೆಯು ಸೆಪ್ಟೆಂಬರ್ 19ರಂದು ಅಂಗೀಕರಿಸಿತ್ತು.
ಈ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಕೋವಿಡ್ ವಿರುದ್ಧ ಹೋರಾಟಕ್ಕೆ ಕೇಂದ್ರ ಸರ್ಕಾರ ''ಆ್ಯಕ್ಟ್ ಆಫ್ ಗಾಡ್''ಗಾಗಿ ಕಾಯುತ್ತಿಲ್ಲ. ದಿನದ 24 ಗಂಟೆಯೂ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಂಸತ್ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಅವರು, ಕೊರೊನಾ ವಿಚಾರವಾಗಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದವರಿಗೆ ಉತ್ತರ ನೀಡಿದರು.
ಈ ಮಸೂದೆಯನ್ನು ಮಂಡಿಸುವ ಮೊದಲು ರ್ಕಾರ ವಿವಿಧ ಕಾನೂನು ತಜ್ಞರಿಂದ ಸಲಹೆ ತೆಗೆದುಕೊಂಡಿದೆ. ಈ ಕಾಯ್ದೆಯಡಿ ನಮ್ಮ ಕೊರೊನಾ ವಾರಿಯರ್ಸ್ ಅನ್ನು ಅವಮಾನಿಸುವವರಿಗೆ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಹರ್ಷವರ್ಧನ್ ಲೋಕಸಭೆಯಲ್ಲಿ ಹೇಳಿದರು.
ಮಸೂದೆಗೆ ಸುಗ್ರೀವಾಜ್ಞೆ ಅಗತ್ಯವಾಗಿತ್ತು ಎಂದಿರುವ ಅವರು ದೇಶಾದ್ಯಂತ 22 ಲಕ್ಷ ಕೊರೊನಾ ಯೋಧರಿಗೆ ನಾವು ವಿಮೆಯನ್ನು ಘೋಷಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗ ಲೋಕಸಭೆಯಲ್ಲಿ ಅಂಗೀಕಾರವಾದ ಕಾಯ್ದೆಯ ಪ್ರಕಾರ ಕೊರೊನಾ ವಾರಿಯರ್ಸ್ಅನ್ನು ಅವಮಾನಿಸುವವರಿಗೆ 50 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿಯವರೆಗೆ ದಂಡ ಅಥಬಾ ಮೂರು ತಿಂಗಳಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಮಸೂದೆಯ ಜೊತೆಗೆ ಲೋಕಸಭೆಯು ಹೋಮಿಯೋಪತಿ ಕೇಂದ್ರ ಮಂಡಳಿ (ತಿದ್ದುಪಡಿ) ಮಸೂದೆ-2020 ಹಾಗೂ ಭಾರತೀಯ ಔಷಧ ಕೇಂದ್ರ ಮಂಡಳಿ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ.