ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 60 ವರ್ಷದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಷರೀಫ್ ಖಾನ್ ಜಾಮೀನು ಪಡೆದ ವ್ಯಕ್ತಿಯಾಗಿದ್ದು, ಮಧ್ಯಂತರ ಜಾಮೀನಿನ ಅವಧಿಯಲ್ಲಿ ಸನ್ನಡತೆ ಕಾರಣದಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜಾಮೀನು ನೀಡಿ ಕೆಲವೊಂದು ಷರತ್ತುಗಳನ್ನು ದೆಹಲಿ ಹೈಕೋರ್ಟ್ ವಿಧಿಸಿದ್ದು, ಯಾವುದೇ ಕಾರಣಕ್ಕೂ ದೆಹಲಿಯನ್ನು ಬಿಟ್ಟು ಹೊರಡಬಾರದು. ಪ್ರತೀ ಎರಡು ದಿನಕ್ಕೊಮ್ಮೆ ತನಿಖಾಧಿಕಾರಿಯ ಬಳಿ ವರದಿ ಮಾಡಿಕೊಳ್ಳಬೇಕು ಹಾಗೂ ಕುಟುಂಬದ ಸದಸ್ಯರ ಮೊಬೈಲ್ ಫೋನ್ ನಂಬರ್ಗಳನ್ನು ತನಿಖಾಧಿಕಾರಿಗೆ ನೀಡಬೇಕೆಂದು ಸೂಚನೆ ನೀಡಲಾಗಿದೆ.
ಇದರ ಜೊತೆಗೆ ತನಿಖಾಧಿಕಾರಿ ವಿಚಾರಣೆಗೆ ಹಾಜರಾಗಲು ಕರೆದಾಗ ಬರಬೇಕೆಂದು, ಮೊಬೈಲ್ ನಂಬರ್ಗಳು ಬದಲಾವಣೆಯಾದರೆ ಹೊಸ ಸಂಖ್ಯೆಯನ್ನು ತನಿಖಾಧಿಕಾರಿಗೆ ನೀಡಬೇಕೆಂದು ಕೋರ್ಟ್ ನಿರ್ದೇಶನ ನೀಡಿದೆ.
ತನಿಖಾಧಿಕಾರಿಯ ಪ್ರಕಾರ 45 ದಿನಗಳ ಮಧ್ಯಂತರ ಜಾಮೀನು ಅವಧಿಯಲ್ಲಿ ಆರೋಪಿಯ ವರ್ತನೆ ತೃಪ್ತಿಕರವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಯು ತಮ್ಮ ಹಾಗೂ ತಮ್ಮ ಮಗಳ ಮೊಬೈಲ್ ಸಂಖ್ಯೆಯನ್ನು ತನಿಖಾಧಿಕಾರಿಗೆ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಹಿತಿ ನೀಡಿದ್ದಾರೆ.
ಮಧ್ಯಂತರ ಜಾಮೀನು ಅವಧಿಯಲ್ಲಿ ಆರೋಪಿ ನಿಯಮಿತವಾಗಿ ತನಿಖಾಧಿಕಾರಿಗೆ ವರದಿ ಮಾಡುತ್ತಿದ್ದರು ಹಾಗೂ ಈ ಅವಧಿಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ ಎಂದೂ ಎಸ್.ವಿ. ರಾಜು ಸ್ಪಷ್ಟನೆ ನೀಡಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ನೀಡಿದ ಮಾಹಿತಿಯಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಷರೀಫ್ ಖಾನ್ಗೆ ಸಾಮಾನ್ಯ ಬೇಲ್ ನೀಡಿದ್ದಾರೆ. ಇದರ ಜೊತೆಗೆ ಕೆಲವೊಂದು ಷರತ್ತುಗಳನ್ನು ಕೂಡಾ ವಿಧಿಸಿದ್ದಾರೆ. ಈ ಮೂಲಕ ವಿಳಾಸ ಬದಲಾದರೂ ತನಿಖಾಧಿಕಾರಿಗೆ ಆರೋಪಿ ತಿಳಿಸಬೇಕಾಗುತ್ತದೆ.