ಶ್ರೀನಗರ: ಬಿಜೆಪಿಯಿಂದ ನೀಡಲಾಗುತ್ತಿರುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಇದನ್ನು ನಾನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿಕೆಗೆ ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.
ಓದಿ: ಇದು ಬಿಜೆಪಿ ಲಸಿಕೆ, ನಾನು ತೆಗೆದುಕೊಳ್ಳುವುದಿಲ್ಲ: ಅಖಿಲೇಶ್ ಯಾದವ್
ನಾನು ಕೊರೊನಾ ಲಸಿಕೆ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಯಾವುದೇ ಲಸಿಕೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂದಿರುವ ಅವರು, ಲಸಿಕೆ ಮಾನವೀಯತೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ಟಿಟರ್ನಲ್ಲಿ ಬರೆದುಕೊಂಡಿರುವ ಅಬ್ದುಲ್ಲಾ, ಲಸಿಕೆ ಬಗ್ಗೆ ಬೇರೆಯವರು ಏನು ಮಾತನಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಸರದಿ ಬಂದಾಗ ಖಂಡಿತವಾಗಿ ಲಸಿಕೆ ತೆಗೆದಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ದೇಶದ ಜನರು ವ್ಯಾಕ್ಸಿನ್ ತೆಗೆದುಕೊಳ್ಳುವುದರಿಂದ ದೇಶದ ಹಿತದೃಷ್ಟಿ ಹಾಗೂ ಆರ್ಥಿಕತೆ ದೃಷ್ಟಿಯಿಂದ ಒಳ್ಳೆಯದು ಎಂದು ತಿಳಿಸಿದ್ದು, ಲಸಿಕೆಗಳು ಯಾವುದೇ ಪಕ್ಷಕ್ಕೆ ಸಿಮೀತವಾಗಿರುವುದಿಲ್ಲ ಎಂದಿದ್ದಾರೆ.
ಜನವರಿ 14ರಂದು ಆಚರಿಸಲಿರುವ ಹಿಂದೂ ಹಬ್ಬ 'ಮಕರ ಸಂಕ್ರಾಂತಿ' ವೇಳೆಗೆ ರಾಜ್ಯದಲ್ಲಿ ಕೋವಿಡ್ ಲಸಿಕೆ ಲಭ್ಯವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಖಿಲೇಶ್, ಬಿಜೆಪಿಯಿಂದ ನೀಡಲಾಗುತ್ತಿರುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಇದನ್ನು ನಾವು ಪಡೆಯಲು ಸಾಧ್ಯವಿಲ್ಲ. 2022ರ ಚುನಾವಣೆಯ ನಂತರ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗಲಿದೆ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.