ನವದೆಹಲಿ: ಕೊರೊನಾ ಹಿನ್ನೆಲೆ ನಿರ್ಬಂಧಗಳನ್ನು ವಿಧಿಸಿದ ಪರಿಣಾಮ ಆಸ್ಟ್ರೇಲಿಯಾದ ವಿವಿಧ ಸ್ಥಳಗಳಿಗೆ ತೆರಳಲು ಜುಲೈ 4 ರಿಂದ ಜುಲೈ 14 ರವರೆಗೆ ನಿಗದಿಯಾಗಿದ್ದ, ವಂದೇ ಭಾರತ್ ಮಿಷನ್‌ನ ಎಲ್ಲಾ ವಿಮಾನಗಳ ಹಾರಾಟವನ್ನು ಮುಂದೂಡಲಾಗಿದೆ.
"ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಅಂತರ್ರಾಷ್ಟ್ರೀಯ ವಿಮಾನಯಾನಕ್ಕೆ ವಿಧಿಸಲಾದ ಕೋವಿಡ್-19 ಸಂಬಂಧಿತ ನಿರ್ಬಂಧಗಳಿಂದಾಗಿ, ಆಸ್ಟ್ರೇಲಿಯಾಗೆ ತೆರಳಬೇಕಿದ್ದ ಭಾರತೀಯ ವಿಮಾನಯಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ವಿಮಾನಯಾನ ದಿನಾಂಕಗಳನ್ನು ಮರು ನಿಗದಿಪಡಿಸಲಾಗುವುದು" ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಮರುನಿಗದಿಯಾದ ಎಲ್ಲಾ ವಿಮಾನಗಳು ಜುಲೈ 15 ರಿಂದ ಕಾರ್ಯನಿರ್ವಹಿಸಲಿವೆ.
ಕಳೆದ ತಿಂಗಳು ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎಂಟು ವಿಮಾನಗಳ ಹಾರಾಟವನ್ನು ಏರ್ ಇಂಡಿಯಾ ಘೋಷಿಸಿತ್ತು. ಜುಲೈ 1 ರಿಂದ ಜುಲೈ 14 ರವರೆಗೆ ವಿಮಾನಗಳು ಕಾರ್ಯನಿರ್ವಹಿಸಲು ನಿರ್ಧರಿಸಲಾಗಿತ್ತು.
ವಂದೇ ಭಾರತ್ ಮಿಷನ್‌ನ ನಾಲ್ಕನೇ ಹಂತವು ಜುಲೈ 3 ರಿಂದ ಪ್ರಾರಂಭವಾಗಿತ್ತು. ಇದರಲ್ಲಿ ಸುಮಾರು 700ಕ್ಕೂ ಹೆಚ್ಚು ವಿಮಾನಗಳ ಮೂಲಕ 1.50 ಲಕ್ಷ ಭಾರತೀಯರನ್ನು ವಾಪಸ್ ಕರೆತರುವ ಉದ್ದೇಶವನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.