ಅಮರಾವತಿ(ಆಂಧ್ರ ಪ್ರದೇಶ): ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಭಾರತದಲ್ಲಿ ತನ್ನ ರೌದ್ರಾವತಾರ ತೋರಿಸಲು ಆರಂಭ ಮಾಡಿದೆ. ಹೀಗಾಗಿ ಏಪ್ರಿಲ್ 21ರವರೆಗೆ ದೇಶವನ್ನ ಸಂಪೂರ್ಣವಾಗಿ ಲಾಕ್ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.
ದೇಶವನ್ನು ಲಾಕ್ಡೌನ್ ಮಾಡುವುದಕ್ಕಿಂತಲೂ ಮುಂಚಿತವಾಗಿ ಶಿಕ್ಷಣ ತರಬೇತಿ ಕೇಂದ್ರಗಳು, ಕೋಚಿಂಗ್ ಸೆಂಟರ್, ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳನ್ನ ಬಂದ್ ಮಾಡಿ ಆದೇಶ ಹೊರಡಿಸಿದ್ದರಿಂದ ಪರೀಕ್ಷೆಗಳು ಮುಂದೂಡಿಕೆಯಾಗಿದ್ದವು. ಇದೀಗ ಆಂಧ್ರ ಪ್ರದೇಶ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
6ನೇ ತರಗತಿಯಿಂದ 9ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪರೀಕ್ಷೆ ಈಗಾಗಲೇ ಆರಂಭವಾಗಬೇಕಿತ್ತು. ಆದರೆ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿರುವ ಕಾರಣ ಅವರು ಪರೀಕ್ಷೆ ಬರೆಯಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹಾಗಾಗಿ ಅವರನ್ನ ತೇರ್ಗಡೆ ಮಾಡಿ ಮುಂದಿನ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುವುದು ಎಂದು ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರ ಜೊತೆ ಇಂದು ಸಭೆ ನಡೆಸಿದ ಜಗನ್ ಮೋಹನ್ ರೆಡ್ಡಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೊರೊನಾ ವೈರಸ್ನಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ನಿರ್ಧಾರ ಆಂಧ್ರ ಪ್ರದೇಶದ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗಲಿದ್ದು, ಅಧಿಕಾರಿಗಳು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಅವರ ಮನೆ ಬಾಗಿಲಿಗೆ ರೇಷನ್ ನೀಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.