ನವದೆಹಲಿ: ಇನ್ನು ಕೇವಲ ಒಂದೇ ವರ್ಷದಲ್ಲಿ ಬೆಂಗಳೂರು ಸೇರಿ ಭಾರತದ 21 ನಗರಗಳಲ್ಲಿ ಜಲಕ್ಷಾಮ ಎದುರಾಗಲಿದ್ದು, 100 ಮಿಲಿಯನ್ ಮಂದಿ ಇದರ ನೇರ ಪರಿಣಾಮ ಅನುಭವಿಸಲಿದ್ದಾರೆ ಎಂದು ನೀತಿ ಆಯೋಗದ ಇತ್ತೀಚಿನ ವರದಿ ಹೇಳಿದೆ.
ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್ ಸೇರಿ ದೇಶದ 21 ನಗರಗಳಲ್ಲಿ ಅಂತರ್ಜಲ ಬರಿದಾಗಲಿದೆ. ಚೆನ್ನೈನ ಜಲ ಮೂಲಗಳಾದ ಮೂರು ನದಿ, ನಾಲ್ಕು ಜಲ ಸೆಲೆ, ಐದು ತಂಪು ಭೂ ಪ್ರದೇಶ ಬರಿದಾಗಲಿವೆ. ಇದೇ ಸ್ಥಿತಿ ಎಲ್ಲ ಮೆಟ್ರೋ ನಗರಗಳಲ್ಲಿ ಉಂಟಾಗಲಿದೆ. ಇನ್ನು 2030ರ ವೇಳೆಗೆ ದೇಶದ ಶೇ. 40ರಷ್ಟು ಜನರಿಗೆ ಕುಡಿಯಲು ನೀರು ಸಿಗಲ್ಲ ಎಂದೂ ಹೇಳಲಾಗಿದೆ.
ಈ ಬಗ್ಗೆ ರಾಷ್ಟ್ರೀಯ ನೀರು ಅಕಾಡೆಮಿಯ ಪ್ರೊ. ಮನೋಹರ್ ಖುಶಾಲಾನಿ ಮಾತನಾಡಿ, ಚೆನ್ನೈ ಸರ್ಕಾರ ಭೂಮಿ ನಿಯಮಿತವಾದದ್ದು, ಸಾಗರಗಳು ಬರಿದಾಗುತ್ತವೆ ಎಂಬುದನ್ನು ಮರೆತಿದೆ. ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ನಾವು ಏನನ್ನು ನೀಡುತ್ತಿದ್ದೇವೆ? ಹಣವನ್ನು ಅವರು ಕುಡಿಯಲಾಗದು. ಇಲ್ಲ ಸಲ್ಲದ ಯೋಜನೆಗಳಿಗಿಂತ ಜಲ ಸಂರಕ್ಷಣೆ ಅಗತ್ಯವಿದೆ ಎಂದಿದ್ದಾರೆ.
ಅಂತರ್ಜಲ ಹೆಚ್ಚುವಂತೆ ಮಾಡುವುದು ಸರ್ಕಾರ ಹಾಗೂ ಜನರ ಜವಾಬ್ದಾರಿ. ಮುಂದಿನ ಪೀಳಿಗೆ ಬಗ್ಗೆ ನಾವು ಚಿಂತಿಸಬೇಕಿದೆ. ಇಂದು ನಾವು ಜಾಗೃತವಾಗದಿದ್ದರೆ ನಾಳೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದ್ದಾರೆ.