ಚೆನ್ನೈ (ತಮಿಳುನಾಡು): ಕೋವಿಡ್-19 ರೋಗ ಹರಡುವಿಕೆಯನ್ನು ತಗ್ಗಿಸಲು ನಮ್ಮ ಕಂಪನಿ ಮೇಲೆ ಲಸಿಕೆ ಅಭಿವೃದ್ಧಿಪಡಿಸುವಂತೆ ಒತ್ತಡ ಬರುತ್ತಿದೆ. ಲಸಿಕೆ ಅಭಿವೃದ್ಧಿಪಡಿಸಲು ಅದರ ಸುರಕ್ಷತೆ ಮತ್ತು ಗುಣಮಟ್ಟದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಂ. ಎಲಾ ಅವರು ಹೇಳಿದರು.
ಚೆನ್ನೈನ ಅಂತಾರಾಷ್ಟ್ರೀಯ ಸಂವಾದವೊಂದರಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಲಸಿಕೆ ಅಭಿವೃದ್ಧಿಪಡಿಸುವಂತೆ ಹೆಚ್ಚು ಹೆಚ್ಚು ಒತ್ತಡ ತರುತ್ತಿದ್ದಾರೆ. ಹಾಗಾಗಿ ನಾವು ಅದನ್ನು ಉತ್ತಮ ಗುಣಮಟ್ಟದಲ್ಲಿ, ಸುರಕ್ಷಿತವಾಗಿ ಮತ್ತು ಕೈಗೆಟುಕುವ ಬೆಲೆಯಲ್ಲಿ ಹೊರತರುವ ಪ್ರಯತ್ನದಲ್ಲಿದ್ದೇವೆ. ಈ ವಿಷಯಗಳಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ಲಸಿಕೆ ಬಿಡುಗಡೆಗಾಗಿ ದಿನಾಂಕವನ್ನು ಘೋಷಿಸಲು ನಿರಾಕರಿಸಿದ ಕೃಷ್ಣ, ಕ್ಲಿನಿಕಲ್ ಪ್ರಯೋಗಗಳನ್ನು ಅತ್ಯುನ್ನತ ಗುಣಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದಷ್ಟೇ ಹೇಳಿದರು.
ರೋಟವೈರಸ್ನ ಮೊದಲ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸಲು ಸುಮಾರು ಆರು ತಿಂಗಳುಗಳನ್ನು ತೆಗೆದುಕೊಂಡಿದೆ ಎಂದು ವಿವರಿಸಿದ ಎಲಾ, ಇದಕ್ಕೆ ವಿರುದ್ಧವಾಗಿ, ಕೊವಾಕ್ಸಿನ್ನ ಮೊದಲ ಹಂತವನ್ನು ಪೂರ್ಣಗೊಳಿಸಲು ಕೇವಲ 30 ದಿನಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. ತಾಂತ್ರಿಕ ಮತ್ತು ಕ್ಲಿನಿಕಲ್ ಪ್ರಯೋಗ ಎಂದು ಬಂದಾಗ ಭಾರತೀಯ ಲಸಿಕಾ ಉದ್ಯಮ ಚೀನಾಕ್ಕಿಂತಲೂ ಮುಂದಿದೆ ಎಂದು ಅವರು ಹೇಳಿದರು.
ಭಾರತೀಯ ಔಷಧಿ ಕಂಪನಿಗಳ ದಕ್ಷತೆಯ ಬಗ್ಗೆ ಹಲವಾರು ಜನರಿಗೆ ಆತಂಕವಿದೆ. ಈ ನಡುವೆಯೂ ಪ್ಲೇಗ್, ಪೊಲೀಯೋ ಸೇರಿದಂತೆ ಇತರೆ ರೋಗಗಳಿಗಾಗಿ ಲಸಿಕೆ ಅಭಿವೃದ್ಧಿಪಡಿಸಿ ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದರು.
ಇನ್ನು ತಮ್ಮ ನಿರೀಕ್ಷಿತ COVID-19 ಲಸಿಕೆಯನ್ನು ಸಾಮಾನ್ಯ ಜನರ ಕೈಗೆಟುಕುವಂತೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ಅವರು, ಕೋವಿಡ್ನಿಂದ ಕೇವಲ ಸಾವುಗಳು ಮಾತ್ರ ಆಗುತ್ತಿಲ್ಲ, ಇಡೀ ಆರ್ಥಿಕ ವಲಯವೇ ಬುಡಮೇಲಾಗಿದೆ. ಆರ್ಥಿಕ ಶುದ್ಧೀಕರಣದ ಬಗ್ಗೆ ಎಲ್ಲರು ಮಾತನಾಡುತ್ತಿದ್ದಾರೆ. ವಾಸ್ತವವಾಗಿ, ಕೋವಿಡ್ಗಿಂದ ಹೆಚ್ಚಿನ ಸಂಖ್ಯೆಯ ಜನರು ರಸ್ತೆ ಅಪಘಾತಗಳಲ್ಲಿಯೇ ಸಾಯುತ್ತಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದರು.