ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅರೋಗ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಅವರು ಕೋಮಾ ಸ್ಥಿತಿಯಲ್ಲಿಯೇ ಇದ್ದಾರೆ ಎಂದು ಸೇನಾ ಸಂಶೋಧನೆ ಮತ್ತು ರೆಫೆರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿ (84) ಅವರಿಗೆ ಶ್ವಾಸಕೋಶದ ಸಮಸ್ಯೆ ಕಂಡುಬಂದಿದ್ದು, ಆರೋಗ್ಯ ಸ್ಥಿರವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ರೆಫೆರಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಜೊತೆಗೆ ನುರಿತ ತಜ್ಞರ ತಂಡ ಮುಖರ್ಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಮುಖರ್ಜಿ ಅವರನ್ನು ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳಿನಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅಲ್ಲದೇ ಅವರ ಕೊರೊನಾ ರಿಪೋರ್ಟ್ ಕೂಡಾ ಪಾಸಿಟಿವ್ ಬಂದಿತ್ತು. ಶಸ್ತ್ರಚಿಕಿತ್ಸೆ ಬಳಿಕ ಅಂದಿನಿಂದ ಇಂದಿನ ವರೆಗೂ ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಮುಖರ್ಜಿಯವರು 2012 ರಿಂದ 2017 ರವರೆಗೆ ಭಾರತದ 13 ನೇ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.