ಪಾಟ್ನಾ: ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಏಳನೇ ಬಾರಿಗೆ ಬಿಹಾರ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ. ಸಂಜೆ 4:30ಕ್ಕೆ ಪ್ರಮಾಣವಚನ ಸಮಾರಂಭ ನಡೆಯಲಿದೆ.
ಉಪಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿ ನಾಯಕರೊಬ್ಬರು ಅಲಂಕರಿಸಲಿದ್ದು, ಯಾರು ಡಿಸಿಎಂ ಆಗಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ. ಈಗಾಗಲೇ ಬಿಜೆಪಿ ಶಾಸಕಾಂಗದ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆ ಆಗಿರುವ ಕಟಿಹಾರ್ ಶಾಸಕ ತಾರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಅವರ ಹೆಸರು ಡಿಸಿಎಂ ಸ್ಥಾನಕ್ಕೆ ಮುಂಚೂಣಿಯಲ್ಲಿವೆ. ಆದ್ರೆ ಅಂತಿಮವಾಗಿ ಯಾರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬುದು ಸಂಜೆಯೇ ತಿಳಿಯಲಿದೆ.
ಚುನಾವಣೆಗೂ ಮುನ್ನ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸುಶೀಲ್ ಕುಮಾರ್ ಮೋದಿ ಕಾರ್ಯನಿರ್ವಹಿಸಿದ್ದರು. ಹೊಸ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಮೋದಿ, ಪಕ್ಷದ ಕಾರ್ಯಕರ್ತ ಹುದ್ದೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನನಗೆ ನೀಡಲಾಗುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ತಾರ್ಕಿಶೋರ್ಗೆ ಟ್ವೀಟ್ ಮೂಲಕ ಅಭಿನಂದಿಸಿದ್ದರು.
ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕಿಯಾಗಿ ಆಯ್ಕೆಯಾದ ಬೆಟ್ಟಿಯಾ ಶಾಸಕಿ ರೇಣು ದೇವಿ ಅವರನ್ನೂ ಮೋದಿ ಅಭಿನಂದಿಸಿದ್ದು, ನಾಲ್ಕನೇ ಬಾರಿ ಶಾಸಕಿಯಾಗಿ ಆಯ್ಕೆಯಾದ, ನೋನಿಯಾ ಸಮುದಾಯದಿಂದ ಬಂದ ರೇಣು ದೇವಿ ಅವರು ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕಿಯಾಗಿ ಆಯ್ಕೆಯಾಗಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದರು.
ಇದಕ್ಕೂ ಮೊದಲು ನಡೆದ ಎನ್‌ಡಿಎ ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ, ಸತತ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿಯೂ ನಿತೀಶ್ ಕುಮಾರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ 243 ಸದಸ್ಯರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 125 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಬಹುಮತ ಗಳಿಸಿದೆ.