ವಾಷಿಂಗ್ಟನ್(ಅಮೆರಿಕ) : ಸರ್ಕಾರದ ವಿಳಂಬ ನೀತಿ, ನಿರಾಸಕ್ತಿಯೇ ಆರ್ಥಿಕ ಕುಸಿತಕ್ಕೆ ಕಾರಣ ಎಂಬ ಮಾಜಿ ಪಿಎಂ ಮನಮೋಹನ್ ಸಿಂಗ್ ಹೇಳಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಅಮೆರಿಕಾದಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ಯಾವಾಗ ಮತ್ತು ಏನು ತಪ್ಪಾಗಿದೆ ಎಂಬುದನ್ನು ಮೆಲುಕು ಹಾಕುವುದು ಅವಶ್ಯಕ. ಮನಮೋಹನ್ ಸಿಂಗ್ ತಮ್ಮ ಸರ್ಕಾರವನ್ನು ದೂಷಿಸಬೇಡಿ ಎಂದಿದ್ದನ್ನು ನಾನು ಗೌರವಿಸುತ್ತೇನೆ. ಆದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ಯಾವಾಗ ಮತ್ತು ಏನು ತಪ್ಪಾಗಿದೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಟಾಂಗ್ ನೀಡಿದ್ದಾರೆ.
ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲೊಂದು. ಕೇಂದ್ರ ಸರ್ಕಾರವು ಆರ್ಥಿಕತೆಯ ಬೆಳವಣಿಗೆಯನ್ನು ಉತ್ತೇಜಿಸಲು ಸಾಕಷ್ಟು ಶ್ರಮವಹಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಭಾರತದ ಆರ್ಥಿಕ ಬೆಳವಣಿಗೆ ಕುಸಿಯಲಿರುವ ಬಗ್ಗೆ ಮುನ್ಸೂಚನೆ ಕೊಟ್ಟಿದೆ. ಆದರೆ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
ಐಎಂಎಫ್ ತನ್ನ ಇತ್ತೀಚಿನ ವರದಿಯಲ್ಲಿ ವಿಶ್ವದ ಎಲ್ಲಾ ಆರ್ಥಿಕತೆಗಳ ಅಭಿವೃದ್ಧಿ ದರವನ್ನು ತಿಳಿಸಿದೆ. ಅದೇ ರೀತಿ ಭಾರತದ ಅಭಿವೃದ್ಧಿ ದರದ ಕುಸಿತವನ್ನು ವರದಿ ಮಾಡಿದೆ. ಆದರೆ ನಿರ್ದಿಷ್ಟ ಜಾಗತಿಕ ಸನ್ನಿವೇಶದಲ್ಲಿ ಭಾರತ ಇನ್ನೂ ವೇಗವಾಗಿ ಬೆಳೆಯುತ್ತಿದೆ ಎಂಬ ಅಂಶವನ್ನು ಮರೆಯಬಾರದು ಎಂದರು.
2018 ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ. 6.8 ರಷ್ಟಿತ್ತು. ಆದರೆ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್ಲುಕ್ನಲ್ಲಿ ಐಎಂಎಫ್, ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ. 6.1 ರಷ್ಟಿದೆ ಎಂದು ವರದಿ ಮಾಡಿದೆ. 2020 ರ ವೇಳೆಗೆ ಶೇ.7 ಕ್ಕೆ ಭಾರತದ ಆರ್ಥಿಕ ಅಭಿವೃದ್ಧಿ ದರ ಏರಲಿದೆ ಎಂದು ಮುನ್ಸೂಚನೆ ನೀಡಿದೆ.
ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತ ತನ್ನ ಆರ್ಥಿಕತೆಯಲ್ಲಿ ತೋರುತ್ತಿರುವ ಶಕ್ತಿಯನ್ನು ಅಲ್ಲಗಳೆಯಬಾರದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸದ್ಯ ಅಮೆರಿಕದಲ್ಲಿರುವ ನಿರ್ಮಲಾ, ವಿಶ್ವ ಬ್ಯಾಂಕ್ ಹಾಗೂ ಐಎಂಎಫ್ನ ವಾರ್ಷಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.