ನಾಗ್ಪುರ್: ದೆಹಲಿ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗಲ್ಲಿಗೇರಲು ಮುಹೂರ್ತ ಫಿಕ್ಸ್ ಆಗಿದೆ. ಈ ಮಧ್ಯೆ ಅಂತಹದ್ದೇ ಅತ್ಯಾಚಾರ ಪ್ರಕರಣವೊಂದು ದೇಶದಲ್ಲಿ ಸದ್ದು ಮಾಡಿದೆ. ನಾಗ್ಪುರದಲ್ಲಿ ಈ ಪ್ರಕರಣ ನಡೆದಿದ್ದು, ದೇಶವನ್ನು ಮತ್ತೊಮ್ಮೆ ಬೆಚ್ಚಿ ಬೀಳಿಸುವಂತಿದೆ.
ಇಲ್ಲಿನ ಪಾರ್ಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಂಪನಿಯೊಂದರಲ್ಲಿ 19 ವರ್ಷದ ಯುವತಿ ಕೆಲಸ ಮಾಡುತ್ತಿದ್ದಳು. 52 ವರ್ಷದ ಯೋಗಿಲಾಲ್ ರಹಂಗಡಲೆ ಎಂಬಾತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಜ. 21 ರಂದು ಯುವತಿಯ ಮುಖಕ್ಕೆ ಮೂರ್ಛೆ ಹೋಗುವ ಸ್ಪ್ರೇ ಹೊಡೆದು, ನಿರ್ಜನ ಪ್ರದರ್ಶಕ್ಕೆ ಕೊಂಡೊಯ್ದಿದ್ದ. ಆರೋಪಿ ಯೋಗಿಲಾಲ್ ಜೊತೆ ಇನ್ನೋರ್ವ ಕಾಮುಕ ಸೇರಿಕೊಂಡು ಇಬ್ಬರು ಯುವತಿ ಮೇಲೆ ರಾತ್ರಿಯಿಡಿ ಅತ್ಯಾಚಾರವೆಸಗಿದ್ದಾರೆ. ಬಳಿಕ ಯುವತಿಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ಗಳಿಂದ ಚುಚ್ಚಿ ಹಲ್ಲೆ ಮಾಡಿದ್ದಾರೆ. ಸತತವಾಗಿ ಮೂರು ದಿನಗಳ ಕಾಲ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು, ನಾಲ್ಕನೇ ದಿನ ಸಂತ್ರಸ್ತೆಯೇ ಕಾಮುಕರಿಂದ ತಪ್ಪಿಸಿಕೊಂಡು ಬಂದಿದ್ದಾಳೆ.
ಇನ್ನು, ಯುವತಿ ನೇರ ಪಾರ್ಡಿ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಳು. ತನಿಖೆ ಕೈಗೊಂಡ ಪೊಲೀಸರು ಆರೋಪಿ ಯೋಗಿಲಾಲ್ನನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಜಾಲ ಬೀಸಿದ್ದಾರೆ.