ನವದೆಹಲಿ: 2012ರ ಡೆಸೆಂಬರ್ನಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ನಾಲ್ವರು ಅಪರಾಧಿಗಳ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮತ್ತೊಮ್ಮೆ ಡೆತ್ ವಾರೆಂಟ್ ಜಾರಿಗೊಳಿಸಿದೆ.
ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕುವಂತೆ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಮುಕೇಶ್ ಕುಮಾರ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಗಲ್ಲು ಶಿಕ್ಷೆಗೆ ಗುರಿಯಾದವರು.
ದೇಶದ ಅಂತಸತ್ವವನ್ನೇ ಕೆಣಕಿದ ಪ್ರಕರಣ
2012ರ ಡಿಸೆಂಬರ್ 16ರಂದು ಬಸ್ಸಿನೊಳಗೆ ಆರು ಮಂದಿ ಸೇರಿ ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ (ಹೆಸರು ಬದಲಿಸಲಾಗಿದೆ) ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಆಕೆ ಮೇಲೆ ದೈಹಿಕವಾಗಿಯೂ ಹಲ್ಲೆ ನಡೆಸಲಾಗಿತ್ತು. ಈ ಕಾಮುಕರು ಸಂತ್ರಸ್ತೆ ಜೊತೆಗಿದ್ದ ಸ್ನೇಹಿತನ ಕೈ ಕಾಲು ಕಟ್ಟಿ, ಆತನ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಿದ್ದರು. ಅಂದು ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಜೀವನ್ಮರಣ ಹೋರಾಟ ನಡೆಸಿ ಸಿಂಗಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಈ ಘಟನೆಗೆ ಆಕೆಯ ಜೊತೆಗಿದ್ದ ಸ್ನೇಹಿತನನ್ನು ಬಿಟ್ಟರೆ ಮತ್ಯಾರು ಸಾಕ್ಷಿಗಳಿರಲಿಲ್ಲ. ರಾಮ್ ಸಿಂಗ್, ಅಕ್ಷಯ್, ವಿನಯ್, ಮುಕೇಶ್, ಪವನ್ ಕುಮಾರ್ ಹಾಗೂ ಮತ್ತೋರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ. ಬಾಲಾಪರಾಧ ನ್ಯಾಯಾಲಯದಲ್ಲಿ ಅಪರಾಧಿಯನ್ನು ವಿಚಾರಣೆ ನಡೆಸಲಾಗಿತ್ತು. ಮಾಡಿರುವ ತಪ್ಪು ರುಜುವಾತಾದ ಬಳಿಕ ಉಳಿದ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು.
ಗಲ್ಲು ನಿಗದಿಪಡಿಸಿದ ಬಳಿಕ ಇಲ್ಲಿಯವರೆಗೂ ನಡೆದು ಬಂದ ಹಾದಿ...
- ನಿರ್ಭಯಾ ಅತ್ಯಾಚಾರಿಗಳಿಗೆ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿ ಕೋರ್ಟ್ ಗಲ್ಲು ತೀರ್ಪು ಹೊರಡಿಸಿತ್ತು. ಬಳಿಕ ಅಪರಾಧಿಗಳು ನ್ಯಾಯಾಲಯದ ಆದೇಶ ಪ್ರಶ್ನಿಸಿ ಪರಿಹಾರತ್ಮಕ ಅರ್ಜಿ ಸಲ್ಲಿಸಿ ಗಲ್ಲಿನಿಂದ ಪಾರಾಗಿದ್ದರು.
- ನಾಲ್ವರಲ್ಲಿ ಇಬ್ಬರು ಅಪರಾಧಿಗಳು (ವಿನಯ್ ಶರ್ಮಾ ಮತ್ತು ಮುಕೇಶ್ ಕುಮಾರ್ ಸಿಂಗ್) ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು (ಪರಿಹಾರಾತ್ಮಕ ಅರ್ಜಿ) ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ಮೂಲಕ ಅಪರಾಧಿಗಳಿಗೆ ಇದ್ದ ಕೊನೆಯ ಕಾನೂನಿನ ಅವಕಾಶವೂ ಮುಗಿದು ಹೋಗಿತ್ತು.
- ಅದಾದ ನಂತರ ರಾಷ್ಟ್ರಪತಿಗೆ ಅಪರಾಧಿ ಮುಕೇಶ್ ಕುಮಾರ್ ಸಿಂಗ್ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದ. ರಾಮನಾಥ್ ಕೋವಿಂದ್ ಅವರು ಈ ಅರ್ಜಿಯನ್ನು ತಿರಸ್ಕರಿಸಿದ ಪರಿಣಾಮ ಮತ್ತೆ ಫೆ.1ಕ್ಕೆ ಹೊಸ ದಿನಾಂಕ ನಿಗದಿಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದರಿಂದಾಗಿ ಜನವರಿ 22ರಂದು ನಿಗದಿಯಾಗಿದ್ದ ಗಲ್ಲು ಶಿಕ್ಷೆ ಫೆ.1ಕ್ಕೆ ಮುಂದೂಡಲಾಯಿತು.
- ರಾಷ್ಟ್ರಪತಿ ಕ್ಷಮಾದಾನ ಅರ್ಜಿ ತಿರಿಸ್ಕರಿಸಿದ್ದ ನಿರ್ಧಾರ ಪ್ರಶ್ನಿಸಿ ಅಪರಾಧಿ ಮುಖೇಶ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಜನವರಿ 29ರಂದು ತಿರಸ್ಕರಿಸಿತ್ತು.
- ಜನವರಿ 30ರಂದು ಮತ್ತೋರ್ವ ಅಪರಾಧಿ ಅಕ್ಷಯ್ ಕುಮಾರ್ ಸಿಂಗ್ ಪರಿಹಾರಾತ್ಮಕ ಅರ್ಜಿ ಸಲ್ಲಿಕೆ. ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್. ಇದರಿಂದಾಗಿ ಪಟಿಯಾಲಾ ಹೌಸ್ ಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಮತ್ತೆ ದಿನಾಂಕ ನಿಗದಿಪಡಿಸುವುದಾಗಿ ಹೇಳಿತ್ತು.
- ನಂತರ ಅಪರಾಧಿ ಪವನ್ ಗುಪ್ತಾ 'ನಾನು ಬಾಲಾಪರಾಧಿ, ನನಗೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕು' ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪರಿಶೀಲಿಸುಂತೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನೂ ಕೂಡಾ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
- ನಾಲ್ವರು ಅಪರಾಧಿಗಳಿಗೆ ಫೆ.1ರಂದು ನಿಗದಿಯಾಗಿದ್ದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಫೆ.7ರಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು.
- ಆರೋಪಿ ಕ್ಷಮಾದಾನ ಅರ್ಜಿ ರಾಷ್ಟ್ರಪತಿಗಳಿಂದ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ಫೆ.14ರಂದು ವಜಾಗೊಂಡಿತ್ತು.
- ಫೆ.17ರಂದು ಪಟಿಯಾಲ ಹೌಸ್ ಕೋರ್ಟ್, ಮಾರ್ಚ್ 3ಕ್ಕೆ ಹೊಸದಾಗಿ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ.
- ಕಾನೂನಿನ ಪ್ರಕಾರ ಅಪರಾಧಿಗಳು ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರೆ, ಆ ಅರ್ಜಿ ತಿರಸ್ಕೃತಗೊಂಡ ದಿನದಿಂದ ಮುಂದಿನ 14 ದಿನಗಳವರೆಗೂ ಗಲ್ಲಿಗೆ ಹಾಕುವಂತಿಲ್ಲ.