ನವದೆಹಲಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ 2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಮೇಲೆ ದೆಹಲಿಯ ತಿಹಾರ್ ಜೈಲ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಮೂಲಗಳ ಪ್ರಕಾರ ನಾಲ್ವರೂ ಅಪರಾಧಿಗಳನ್ನು ಶೀಘ್ರದಲ್ಲೇ ಗಲ್ಲಿಗೇರಿಸುತ್ತಿದ್ದು, ಅದೇ ಭೀತಿಯಿಂದ ಖಿನ್ನತೆಗೊಳಗಾಗಿದ್ದಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಅಪರಾಧಿಗಳು ಆತ್ಮಹತ್ಯೆ ಯತ್ನ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಅಪರಾಧಿಯ ಮೇಲೂ ಕಣ್ಣಿಡಲಾಗಿದ್ದು, ಪೊಲೀಸ್ ಭದ್ರತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲಾಗಿದೆ.
ಪ್ರಕರಣದ ನಾಲ್ವರು ಅಪರಾಧಿಗಳಾದ ಅಕ್ಷಯ್, ಮುಕೇಶ್, ಪವನ್ ಗುಪ್ತಾ, ವಿನಯ್ ಶರ್ಮಾ ಅದಾಗಲೇ ತಮ್ಮ ಆಹಾರ ಸೇವನೆ ಪ್ರಮಾಣವನ್ನೂ ಕಡಿಮೆ ಮಾಡಿದ್ದಾರೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಐವರು ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬಳಿಕ ಜೈಲಿನಲ್ಲಿ ಇತರ ಅಪರಾಧಿಗಳ ಮೇಲೆ ಖಾಕಿ ಕಣ್ಗಾವಲು ಹೆಚ್ಚಿಸಲಾಗಿದೆ.
ನಿನ್ನೆ, ಅಂದರೆ ಶುಕ್ರವಾರವಷ್ಟೇ ಹಿರಿಯ ಅಧಿಕಾರಿಗಳು ಹಾಗೂ ತಿಹಾರ್ ಜೈಲು ಮಹಾನಿರ್ದೇಶಕ ಸಂದೀಪ್ ಗೋಯಲ್ ಜೈಲ್ ಸಂಖ್ಯೆ 3ಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿಯೇ ನಿರ್ಭಯಾ ಅಪರಾಧಿಗಳು ಮರಣದಂಡನೆಗೆ ಒಳಗಾಗಲಿದ್ದಾರೆ. ಹೀಗಾಗಿ ಅಧಿಕಾರಿಗಳು ಇಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ನಿರ್ಭಯಾ ಅಪರಾಧಿಗಳ ಮರಣದಂಡನೆಯ 'ನೇರ ಪ್ರಸಾರ' ಕೋರಿ ಸುಪ್ರೀಂಗೆ PIL
ಇನ್ನೊಂದು ಕಡೆ ಪ್ರಕರಣದ ಯಾವುದೇ ಮಾಹಿತಿಗಳು ಹೊರ ಹೋಗದಂತೆ ತಡೆಯಲು ಜೈಲು ಸಿಬ್ಬಂದಿಯ ಮೊಬೈಲ್ ಫೋನ್ಗಳನ್ನೂ ಕಣ್ಗಾವಲಿನಲ್ಲಿ ಇಡಲಾಗಿದೆ.
ದೇಶಾದ್ಯಂತ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ನಿರ್ಭಯಾ ಆರೋಪಿಗಳ ಮೇಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಈ ಅಪರಾಧಿಗಳಿಗೆ ನೇಣು ಹಾಕುವ(hangman) ಕೆಲಸ ಮಾಡಲು ನಮಗೆ ಹಲವು ಅರ್ಜಿಗಳು ಬರುತ್ತಿವೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.