ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ಕನೇ ಅಪರಾಧಿಯಾದ ವಿನಯ್ ಶರ್ಮಾ, ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮೊರೆ ಹೋಗಿದ್ದಾನೆ.
ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಮೂಲಕ ಅನಿಲ್ ಬೈಜಾಲ್ಗೆ ಅರ್ಜಿ ಸಲ್ಲಿಸಿರುವ ವಿನಯ್, ಅಪರೂಪದಲ್ಲಿ ಅಪರೂಪದ ಪ್ರಕರಣಗಳಿಗೆ ಮೀಸಲಾಗಿರುವ ಮರಣದಂಡನೆಯಂತಹ ಶಿಕ್ಷೆಗೆ ನಾನು ಅರ್ಹನಲ್ಲ. ನನ್ನ ವಯಸ್ಸು, ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಕೂಡ ಗಮನದಲ್ಲಿಟ್ಟುಕೊಂಡು ಇದಕ್ಕೆ ಪರ್ಯಾಯವಾಗಿ ಜೀವಾವಧಿ ಶಿಕ್ಷೆ ನೀಡಿ ಎಂದು ಉಲ್ಲೇಖಿಸಿದ್ದಾನೆ.
ಈ ಹಿಂದೆ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ಪವನ್ ಕುಮಾರ್ ಗುಪ್ತಾ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ಇನ್ನು ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್, ಪವನ್, ವಿನಯ್ ಮತ್ತು ಅಕ್ಷಯ್ರನ್ನು ಮಾರ್ಚ್ 20 ರಂದು ಗಲ್ಲಿಗೇರಿಸುವಂತೆ ನ್ಯಾಯಾಲಯ ಹೊಸ ಡೆತ್ ವಾರೆಂಟ್ ನೀಡಿದೆ.