ನವದೆಹಲಿ: ನಿರ್ಭಯ ಪ್ರಕರಣ ಅಪರಾಧಿ ವಿನಯ್ ಶರ್ಮಾ ಪರ ವಕೀಲರು ಉಲ್ಲೇಖಿಸುತ್ತಿರುವಂತೆ ಅಪರಾಧಿಯು ಯಾವುದೇ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿಲ್ಲ. ಆತ ಇತ್ತೀಚೆಗಷ್ಟೇ ತನ್ನ ತಾಯಿ ಮತ್ತು ತನ್ನ ವಕೀಲರಿಗೆ ಎರಡು ಫೋನ್ ಕರೆಗಳನ್ನು ಮಾಡಿದ್ದಾನೆ. ಆದರೆ, ಅಪರಾಧಿಯ ಪರ ವಕೀಲರು ಈ ರೀತಿಯ ಹೇಳಿಕೆಯನ್ನು ಏಕೆ ನೀಡುತ್ತಿದ್ದಾರೋ ತಿಳಿಯುತ್ತಿಲ್ಲ ಎಂದು ವಕೀಲ ಸರ್ಕಾರಿ ಅಭಿಯೋಜಕ ಇರ್ಫಾನ್ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಅಪರಾಧಿ ವಿನಯ್ ಶರ್ಮಾ ಪರ ವಕೀಲ ತಮ್ಮ ವಾದ ಮಂಡಿಸಿ ಅಪರಾಧಿಯು ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿದ್ದು, ತನ್ನ ತಾಯಿಯನ್ನೂ ಗುರುತಿಸುವ ಸ್ಥಿತಿಯಲ್ಲಿಲ್ಲ ಎಂದಿದ್ದರು. ಅಪರಾಧಿ ಅನಾರೋಗ್ಯ ಸಂಬಂಧ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ತಿಹಾರ್ ಜೈಲು ಅಧಿಕಾರಿಗಳು ದೆಹಲಿ ನ್ಯಾಯಾಲಯದಲ್ಲಿ ಈ ಸಂಬಂಧ ವರದಿ ಸಲ್ಲಿಸಿದ್ದರು. ಅಪರಾಧಿಯ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಆತನಿಗೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ನಿರ್ದೇಶನ ನೀಡಿತ್ತು. ಆದರೆ, ವಕೀಲ ಇರ್ಫಾನ್ ಅಹ್ಮದ್ ಈ ಬಗ್ಗೆ ಮಾತನಾಡಿ, ಅಪರಾಧಿಯೇ ತನ್ನ ತಲೆಯನ್ನು ಜೈಲಿನ ಗೋಡೆಗೆ ಹೊಡೆದುಕೊಂಡು ಗಾಯ ಮಾಡಿಕೊಂಡು ವೈದ್ಯಕೀಯ ಚಿಕಿತ್ಸೆ ಕೋರಿದ್ದಾನೆ.
ಅಪರಾಧಿಯ ತಲೆಯನ್ನು ಗೋಡೆಗೆ ಹೊಡೆದುಕೊಳ್ಳುವ ದೃಶ್ಯ ಜೈಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಜೈಲು ಅಧಿಕಾರಿಗಳು ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದಿದ್ದಾರೆ.