ಶ್ರೀನಗರ: ರಾಷ್ಟ್ರೀಯ ತನಿಖಾ ಸಂಸ್ಥೆಯ ಐದು ಸದಸ್ಯರ ತಂಡವು ಅಮಾನತುಗೊಂಡ ಜಮ್ಮುಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವಿಂದರ್ ಸಿಂಗ್ ಅವರನ್ನು ವಿಚಾರಣೆ ನಡೆಸಲಿದೆ.
ಈ ತಂಡ ಸಾಕ್ಷ್ಯ ಸಂಗ್ರಹಿಸಲು ಒಂದು ವಾರಗಳ ಕಾಲ ಕಾಶ್ಮೀರದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಈ ತಂಡ ಹಿಂದಿರುಗುವಾಗ ಸಿಂಗ್ ಅವರನ್ನು ದೆಹಲಿಗೆ ಕರೆದೊಯ್ಯುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖಾ ತಂಡವು ಮುಂದಿನ ಕೆಲವು ದಿನಗಳಲ್ಲಿ ಕುಲ್ಗಮ್, ಖಾಜಿಗುಂಡ್, ಶ್ರೀನಗರ ವಿಮಾನ ನಿಲ್ದಾಣ ಮತ್ತು ಸಿಂಗ್ ಅವರ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ.
ಗೃಹ ಸಚಿವಾಲಯದ ಆದೇಶ ಸ್ವೀಕರಿಸಿದ ನಂತರ ಎನ್‌ಐಎ ನಿನ್ನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಪ್ರಕರಣದ ಹಿನ್ನೆಲೆ:
ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಯ ಕಾಜಿಪುರದಲ್ಲಿ ಕಾರಿನಲ್ಲಿ ಪ್ರಯಾಣಿಸುವಾಗ ಸಿಂಗ್ ಅವರನ್ನು ಜನವರಿ 11 ರಂದು ಬಂಧಿಸಲಾಗಿತ್ತು. ಆ ವೇಳೆ ಕಾರಿನಲ್ಲಿ ಕಮಾಂಡರ್ ನವೀದ್ ಬಾಬು ಸೇರಿದಂತೆ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರಿದ್ದರು.