ನವದೆಹಲಿ: ಇಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟದ ತನಿಖೆಯನ್ನು ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ಲುಟಿಯೆನ್ಸ್ ದೆಹಲಿಯ ಹೃದಯ ಭಾಗದಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಬಳಿ ಸಣ್ಣ ಐಇಡಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆದರೆ, ಡಾ ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಬಳಿಯ ಕೆಲವು ಕಾರುಗಳು ಹಾನಿಗೊಳಗಾಗಿದ್ದವು.
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಈ ಸಂಬಂಧ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ, ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದರು. ಅಷ್ಟೇ ಅಲ್ಲ ದುಷ್ಕರ್ಮಿಗಳನ್ನು ಹುಡುಕಲು ಮತ್ತು ಶಿಕ್ಷಿಸಲು ಭಾರತ ತನ್ನ ಎಲ್ಲ ಶಕ್ತಿಯನ್ನು ವಿನಿಯೋಗಿಸಲಿದೆ ಎಂದು ಮೋದಿ ಅವರಿಗೆ ಭರವಸೆ ಕೂಡ ನೀಡಿದ್ದಾರೆ.
ಸ್ಫೋಟದ ತನಿಖೆಗೆ ಸಂಬಂಧಿಸಿದಂತೆ ಭಾರತೀಯ ಮತ್ತು ಇಸ್ರೇಲಿ ಭದ್ರತಾ ಸಂಸ್ಥೆಗಳ ನಡುವಿನ ನಿಕಟ ಹೊಂದಾಣಿಕೆಯ ಬಗ್ಗೆ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.