ಶ್ರೀನಗರ (ಜಮ್ಮು- ಕಾಶ್ಮೀರ): ಪುಲ್ವಾಮಾ ದಾಳಿ ಪ್ರಕರಣ ಕುರಿತಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ. ಕಳೆದ ವರ್ಷ ಫೆಬ್ರವರಿ 14 ರಂದು ಐಇಡಿ ಸ್ಫೋಟದಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಜಮ್ಮುವಿನ ಎನ್‌ಐಎ ನ್ಯಾಯಾಲಯದಲ್ಲಿ ಮಂಗಳವಾರ ಹೇಳಿಕೆ ದಾಖಲಿಸಿದೆ.
ಜುಲೈ 5 ರಂದು ಎನ್ಐಎ ಏಳನೇ ಆರೋಪಿ ಬಿಲಾಲ್ ಅಹ್ಮದ್ ಕುಚೆ ಬಂಧಿಸಲಾಗಿದೆ ಎಂದು ತಿಳಿಸಿದ್ದು, ಆತನನ್ನು 'ಭಯೋತ್ಪಾದಕ ಸಹವರ್ತಿ' ಎಂದು ಸಂಸ್ಥೆ ಹೇಳಿದೆ.
ಏಜೆನ್ಸಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಹಾಜಿಬಲ್ನ ಕಾಕಪೋರಾದ ನಿವಾಸಿಯಾಗಿರುವ ಕುಚೆ ಸಾಮಿಲ್ ನಡೆಸುತ್ತಿದ್ದ. ಅಲ್ಲದೇ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಭಯೋತ್ಪಾದಕರಿಗೆ ಲಾಜಿಸ್ಟಿಕ್ ಬೆಂಬಲವನ್ನೂ ಒದಗಿಸಿದ್ದ ಎಂದು ಹೇಳಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿಗಳು ಕುಚೆ ಮನೆಯಲ್ಲಿಯೇ ಇದ್ದರು ಹಾಗೂ ಆತ ಅವರನ್ನು ತನ್ನ ಇತರ ಕೆಲಸಗಾರರಿಗೆ ಪರಿಚಯಿಸಿದ್ದನು. ಅವರ ವಾಸ್ತವ್ಯಕ್ಕೆ ಹಾಗೂ ವ್ಯವಸ್ಥಿತ ದಾಳಿಗೆ ಯೋಜನೆ ರೂಪಿಸಲು ಸುರಕ್ಷಿತ ಜಾಗ ನೀಡಿದ್ದನು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಆತ ಜೆಇಎಂನ ಭಯೋತ್ಪಾದಕರಿಗೆ ಉನ್ನತ ಮಟ್ಟದ ಮೊಬೈಲ್ ಫೋನ್‌ಗಳನ್ನು ಒದಗಿಸಿದ್ದ. ಪಾಕಿಸ್ತಾನ ಮೂಲದ ಸಂಘಟನೆಯ ನಾಯಕರೊಂದಿಗೆ ಮಾತುಕತೆ ನಡೆಸಲು ಹಾಗೂ ಅವರ ಯೋಜನೆಗೆ ಅಂತಿಮ ಸ್ಪರ್ಶ ನೀಡಲು ಬಳಸುತ್ತಿದ್ದರು ಎಂದು ಸಂಸ್ಥೆ ತಿಳಿಸಿದೆ.
ಇದಲ್ಲದೇ, ಆತ ಒದಗಿಸಿದ ಮೊಬೈಲ್‌ಗಳಲ್ಲಿ ಒಂದನ್ನು ಭಯೋತ್ಪಾದಕ ಆದಿಲ್ ಅಹ್ಮದ್ ದಾರ್ ಅವರ ವಿಡಿಯೋ ಕ್ಲಿಪ್ ರೆಕಾರ್ಡಿಂಗ್ ಮಾಡಲು ಸಹ ಬಳಸಲಾಗಿದ್ದು, ಇದು ದಾಳಿಯ ಬಳಿಕ ವೈರಲ್ ಆಗಿದೆ.