ನವದೆಹಲಿ: ಲೈಂಗಿಕ ಕಾರ್ಯಕರ್ತೆಯರು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಕೆಲಸವಿಲ್ಲದೇ ಸಾಲದ ಹೊಡೆತಕ್ಕೆ ಸಿಲುಕಿ ನಲುಗಿದ್ದರು. ಇವರಿಗೆ ಸರ್ಕಾರದ ಪ್ರಯೋಜನಗಳು ಲಭಿಸಲು ಎನ್ಎಚ್ಆರ್ಸಿಯು ಮಹಿಳಾ ಹಕ್ಕುಗಳ ಸಲಹೆಯಲ್ಲಿ ಮತ್ತೊಮ್ಮೆ ಮಾರ್ಪಡಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮಹಿಳೆಯರ ಹಕ್ಕುಗಳ ಸಲಹೆ ಮಾರ್ಪಡಿಸಿತ್ತು. ಅಕ್ಟೋಬರ್ 7, 2020 ರಂದು ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸಂಬಂಧಪಟ್ಟ ಸಚಿವಾಲಯಗಳಿಗೆ ಮಾರ್ಪಡಿಸಿದ ಪ್ರತಿ ನೀಡಲಾಗಿತ್ತು. ಆದ್ರೆ ಅದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಲೈಂಗಿಕ ಕಾರ್ಯಕರ್ತರ ನೋಂದಣಿ, ಅನೌಪಚಾರಿಕ ಕಾರ್ಮಿಕರು ಮತ್ತು ವಲಸೆ ಲೈಂಗಿಕ ಕಾರ್ಯಕರ್ತರು ಎಂದು ಮೂರು ಭಾಗಗಳನ್ನು ವರ್ಗೀಕರಿಸಿ ಎನ್‌ಎಚ್‌ಆರ್‌ಸಿ ಮಾರ್ಪಡಿಸಿತ್ತು. ಹೀಗಾಗಿ ಎನ್‌ಎಚ್‌ಆರ್‌ಸಿ ವಿರುದ್ಧ ಭಾರಿ ಟೀಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಎನ್‌ಎಚ್‌ಆರ್‌ಸಿ ಈಗ ಲೈಂಗಿಕ ಕಾರ್ಯಕರ್ತೆಯರಿಗೆ ಸಂಬಂಧಿಸಿದ ಸಲಹೆಯನ್ನು ಈಗ ಮತ್ತೊಮ್ಮೆ ಮಾರ್ಪಡಿಸಿದೆ.
ಇತರ ಎಲ್ಲ ಅನೌಪಚಾರಿಕ ಕೆಲಸಗಾರರಂತೆ ಲೈಂಗಿಕ ಕಾರ್ಯಕರ್ತರು ಎಲ್ಲ ಕಲ್ಯಾಣ ಕ್ರಮಗಳು ಮತ್ತು ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ತಾತ್ಕಾಲಿಕ ದಾಖಲೆಗಳನ್ನು ನೀಡುವಂತೆ ಸಚಿವಾಲಯ ಸೂಚಿಸಿದೆ.
ಆಯೋಗ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸಂಬಂಧಪಟ್ಟ ಮಧ್ಯಸ್ಥಗಾರರಿಂದ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ ಮೂಲ ಸಲಹೆ ಮರು ಪರಿಶೀಲಿಸಲಾಗಿದೆ. ಕೊರೊನಾದಿಂದ ಲಾಕ್ಡೌನ್ ವಿಧಿಸಲಾಗಿತ್ತು. ಈ ವೇಳೆ, ಲೈಂಗಿಕ ಕಾರ್ಯಕರ್ತರ ಜೀವನ ಮತ್ತು ಜೀವನೋಪಾಯದ ರಕ್ಷಣೆ ಖಚಿತಪಡಿಸಿಕೊಳ್ಳುವುದಕ್ಕೆ ಎನ್‌ಎಚ್‌ಆರ್‌ಸಿ ಸಲಹೆಯ ಮುಖ್ಯ ಉದ್ದೇಶವಾಗಿದೆ.
ಕಾನೂನಿನಡಿ ಅಸ್ತಿತ್ವದಲ್ಲಿರುವ ನಿಬಂಧನೆಗಳ ಪ್ರಕಾರ, ಎನ್‌ಎಚ್‌ಆರ್‌ಸಿ ಈಗ ಲೈಂಗಿಕ ಕಾರ್ಯಕರ್ತರಿಗೆ ತನ್ನ ಹಿಂದಿನ ವ್ಯಾಖ್ಯಾನವನ್ನು ಮತ್ತೊಮ್ಮೆ ಮಾರ್ಪಡಿಸಿದೆ. ಮಾನವೀಯ ಆಧಾರದ ಮೇಲೆ ಲೈಂಗಿಕ ಕಾರ್ಯಕರ್ತರು ಅನೌಪಚಾರಿಕ ಕಾರ್ಮಿಕರಂತೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅರ್ಹವಾದ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ವಲಸೆ ಲೈಂಗಿಕ ಕಾರ್ಯಕರ್ತರನ್ನು ಲೈಂಗಿಕ ಕಾರ್ಯಕರ್ತರಾಗಿ ಮಾರ್ಪಡಿಸಲಾಗಿದೆ. ರಿವರ್ಸ್ ವಲಸೆಯನ್ನು ಕೈಗೊಳ್ಳಲು ಒತ್ತಾಯಿಸಲ್ಪಟ್ಟ ಲೈಂಗಿಕ ಕಾರ್ಯಕರ್ತರಿಗೆ, ವಲಸೆಗಾರರ ಉಳಿವಿಗಾಗಿ ನೀಡಲಾಗುವ ಪ್ರಯೋಜನಗಳನ್ನು ಒದಗಿಸಬಹುದಾಗಿದೆ.
ಮಾನವ ಹಕ್ಕುಗಳು ಮತ್ತು ಭವಿಷ್ಯದ ಪ್ರತಿಕ್ರಿಯೆ ಮೇಲೆ ಬೀರುವ ಕೊರೊನಾ ಸಾಂಕ್ರಾಮಿಕದ ಪರಿಣಾಮದ ಬಗ್ಗೆ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯಲ್ಲಿ ನಾಗರಿಕ ಸಮಾಜ ಸಂಸ್ಥೆಗಳು, ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳು / ಇಲಾಖೆಗಳ ಪ್ರತಿನಿಧಿಗಳು ಮತ್ತು ಸ್ವತಂತ್ರ ಡೊಮೇನ್ ತಜ್ಞರು ಇದ್ದರು. ಈ ಪ್ರತಿನಿಧಿಗಳು ಸಮಾಜದ ದುರ್ಬಲ ವರ್ಗಗಳು, ಮಹಿಳೆಯರು ಮತ್ತು ಹಕ್ಕಗಳ ಮೇಲೆ ಬೀರುವ ಸಾಂಕ್ರಾಮಿಕ ರೋಗದ ಪ್ರಭಾವವನ್ನು ನಿರ್ಣಯಿಸಿದ್ದಾರೆ. ಸಮಿತಿಯ ಸಲಹೆಗಳ ಆಧಾರದ ಮೇಲೆ ಮೂಲ ಸಲಹೆಗಳ ಬದಲಾಯಿಸಿ ಅಂತಿಮಗೊಳಿಸಲಾಗಿದೆ ಎಂದು ಆಯೋಗವು ತಿಳಿಸಿದೆ.