ನವದೆಹಲಿ: ಯಮುನಾ ನದಿಯ ತೀರದ ವೃಂದಾವನದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ನಿರ್ಮಾಣಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಮಥುರಾ ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶಿಸಿದೆ.
ಈ ಪ್ರದೇಶವು ನೀರಾವರಿ ಇಲಾಖೆಯ ನಿಯಂತ್ರಣದಲ್ಲಿದೆ ಮತ್ತು ಅಲ್ಲಿ ಯಾವುದೇ ನಿರ್ಮಾಣಕ್ಕೆ ಅನುಮತಿ ಇಲ್ಲ ಎಂದು ವೃಂದಾವನ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದ ನಂತರ, ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು ಆಗಸ್ಟ್ 31 ರೊಳಗೆ ಇ-ಮೇಲ್ ಮೂಲಕ ವರದಿ ಸಲ್ಲಿಸುವಂತೆ ಡಿಸಿಗೆ ನಿರ್ದೇಶನ ನೀಡಿದೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯು ಕೇಶಿ ಘಾಟ್ ಬಳಿ ಕಿರು ಸೇತುವೆ ನಿರ್ಮಾಣವನ್ನು ಪ್ರಾರಂಭಿಸಿತ್ತು, ಅದನ್ನು ಅಲಹಾಬಾದ್ ಹೈಕೋರ್ಟ್‌ನ ಆದೇಶದ ಮೇರೆಗೆ ತೆಗೆದು ಹಾಕಲಾಯಿತು. ಬಳಿಕ, ದೇವಾಲಯವೊಂದನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು, ಅದರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಕಾಲ ಕಾಲಕ್ಕೆ ತಾತ್ಕಾಲಿಕ ಗುಡಿಸಲುಗಳನ್ನು ತೆಗೆದು ಹಾಕಲಾಗುತ್ತಿದೆ ಎಂದು ವೃಂದಾವನ ಅಭಿವೃದ್ಧಿ ಪ್ರಾಧಿಕಾರ ನ್ಯಾಯಮಂಡಳಿಗೆ ತಿಳಿಸಿದೆ.
ವರದಿ ಜೊತೆಗೆ ಇದಕ್ಕೆ ಸಂಬಂಧಪಟ್ಟ ಪೋಟೋಗಳನ್ನು ಸಲ್ಲಿಸುವಂತೆ ಎನ್‌ಜಿಟಿ ಸೂಚಿಸಿದ್ದು, ಮುಂದಿನ ಕ್ರಮಕ್ಕೆ ಅದು ಸಹಕಾರಿಯಾಗಲಿದೆ ಎಂದಿದೆ.