ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಎಲ್ಜಿ ಪಾಲಿಮರ್ ಕಂಪನಿಯಲ್ಲಿ ಉಂಟಾದ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರ ಹಾಗೂ ಎಲ್ಜಿ ಪಾಲಿಮರ್ ಕಂಪನಿ, ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ಬೋರ್ಡ್ಗಳಿಗೆ ನೋಟಿಸ್ ಜಾರಿ ಮಾಡಿರುವ ರಾಷ್ಟ್ರೀಯ ಹಸಿರು ಪ್ರಾಧಿಕಾರ, 50 ಕೋಟಿ ರೂ ದಂಡ ತುಂಬಿಕೊಡುವಂತೆ ಹೇಳಿದೆ. ಗ್ಯಾಸ್ ಲೀಕ್ ಪ್ರಕರಣದ ತನಿಖೆಗಾಗಿ ಪ್ರಾಧಿಕಾರ ಐವರು ಸದಸ್ಯರನ್ನೊಳಗೊಂಡ ಸಮಿತಿ ರಚನೆ ಮಾಡಿದ್ದು, ಮೇ 18ರೊಳಗೆ ರಿಪೋರ್ಟ್ ನೀಡುವಂತೆ ತಿಳಿಸಿದೆ. ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಹಸಿರು ಪ್ರಾಧಿಕಾರಿ ತಕ್ಷಣವೇ 50 ಕೋಟಿ ರೂ ದಂಡ ಕಟ್ಟಿಸುವಂತೆ ಎಲ್ಜಿ ಪಾಲಿಮರ್ ಕಂಪನಿಗೆ ಸೂಚನೆ ನೀಡುವಂತೆ ತಿಳಿಸಿದೆ.
ವಿಷಾನಿಲ ಸೋರಿಕೆಯಾಗಿರುವುದರಿಂದ ಅನೇಕ ಜೀವಗಳಿಗೆ ಹಾನಿಯಾಗಿದ್ದು, ಪರಿಸರ ಕೂಡ ನಾಶವಾಗಿದೆ. ಹೀಗಾಗಿ ಎಲ್ಜಿ ಪಾಲಿಮರ್ ಕಂಪನಿ ತಕ್ಷಣವೇ 50 ಕೋಟಿ ರೂ. ಹಣ ಠೇವಣಿ ಇಡುವಂತೆ ಹೇಳಿದೆ.
ವೆಂಕಟಾಪೂರ್ದಲ್ಲಿ ನಡೆದಿರುವ ವಿಷಾನಿಲ ಸೋರಿಕೆ ಪ್ರಕರಣದಿಂದ 12 ಮಂದಿ ಸಾವನ್ನಪ್ಪಿದ್ದು, 300 ಮಂದಿ ಆಸ್ಪತ್ರೆಗೆ ಸೇರಿಕೊಂಡಿದ್ದಾರೆ. ಇದರಲ್ಲಿ 25 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೃತರು, ಗಾಯಗೊಂಡಿರುವ ಕುಟುಂಬಗಳಿಗೆ ಆಂಧ್ರ ಮುಖ್ಯಮಂತ್ರಿ ಈಗಾಗಲೇ ಪರಿಹಾರ ಘೋಷಣೆ ಮಾಡಿದ್ದಾರೆ.